ಮಂಗಳೂರಿನ ಫಸ್ಟ್ ನ್ಯೂರೋ ಗೆ ಹೋಗಿ ಬಂದವರು ತಪಾಸಣೆಗೆ ಒಳಗಾಗಿ: ಉತ್ತರ ಕನ್ನಡ ಡಿಸಿ ಮನವಿ

ಕಾರವಾರ, ಮೇ.8: ಜಿಲ್ಲೆಯ ಭಟ್ಕಳದ ಕಂಟೈನ್ಮೆಂಟ್ ವಲಯದಲ್ಲೇ ಸೋಂಕು ಕಾಣಿಸಿಕೊಂಡಿದೆ. ಸಮುದಾಯಕ್ಕೆ ಸೋಂಕು ಹರಡಿಲ್ಲ. ಶುಕ್ರವಾರ ದೃಢಪಟ್ಟ ಸೋಂಕಿನ ಸಂಖ್ಯೆಯಿಂದ ಜನರು ಆತಂಕ ಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ್ ಕೆ. ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವೈದ್ಯಕೀಯ ಕಾರಣ ನೀಡಿದ ಐದು ತಿಂಗಳ ಮಗುವಿಗೆ ನರಮಂಡಲದ ಚಿಕಿತ್ಸೆಗಾಗಿ ದಕ್ಷಿಣ ಕನ್ನಡ ಜಿಲ್ಲೆಯ ಫಸ್ಟ್ ನ್ಯೂರೋ ಆಸ್ಪತ್ರೆಗೆ ತೆರಳಿದ್ದರು. ಅಲ್ಲಿಂದಲೇ ಕೊರೋನ ಸೋಂಕು ಹರಡಿರುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಸೋಂಕು ಒಂದೇ ಕಟುಂಬದ 10 ಜನರಿಗೆ ತಗುಲಿದ್ದು, ಸೋಂಕಿತೆಯೊಬ್ಬರ ಆಪ್ತ ಸ್ನೇಹಿತೆ ಮತ್ತು ಪಕ್ಕದ ಮನೆಯ ಒಬ್ಬರು ಈಗ ಸೋಂಕು ಪೀಡಿತರಾಗಿದ್ದಾರೆ ಎಂದು ತಿಳಿಸಿದರು.
ಸೋಂಕಿನ ಮೂಲ ಪತ್ತೆಯಾಗಿದ್ದರಿಂದ ಸಮುದಾಯಕ್ಕೆ ಹರಡಿಲ್ಲ ಎಂಬುದು ಖಚಿತವಾಗಿದೆ. ಕೋವಿಡ್ ಸೋಂಕು ಈವರೆಗೆ ಜಿಲ್ಲೆಯ ಕಂಟೈನ್ಮೆಂಟ್ ಪ್ರದೇಶವಾದ ಭಟ್ಕಳದಲ್ಲಿ ಇದ್ದು ಉಳಿದ ಪ್ರದೇಶಗಳ ಜನರು ಆತಂಕಕ್ಕೆ ಒಳಗಾಗಬೇಕಾಗಿಲ್ಲ. ಜಿಲ್ಲೆಯ ಜನರು ಆರೋಗ್ಯ ಚಿಕಿತ್ಸೆಗೆ ಮಂಗಳೂರಿನ ನ್ಯೂರೋ ಆಸ್ಪತ್ರೆಗೆ ಹೋಗಿ ಬಂದಿದ್ದಲ್ಲಿ ಸ್ವಯಂ ಪ್ರೇರಿತರಾಗಿ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಮತ್ತು ಜ್ವರ, ಕೆಮ್ಮುಗಳಿಗೆ ಸ್ವಯಂ ಚಿಕಿತ್ಸೆಗೆ ಮುಂದಾಗಬಾರದು ಎಂದರು.
ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಎಲ್ಲರ ವಿವರ ಒದಗಿಸುವಂತೆ ಅಲ್ಲಿನ ಜಿಲ್ಲಾಡಳಿತಕ್ಕೆ ಕೇಳಲಾಗಿದೆ. ಎಲ್ಲರನ್ನು ತಪಾಸಣೆಗೆ ಒಳಪಡಿಸಲಾಗುತ್ತದೆ. ಸೋಂಕು ಸಮುದಾಯಕ್ಕೆ ಹರಡದಂತೆ ಎಚ್ಚರ ವಹಿಸಬೇಕಿದೆ ಎಂದರು. ನ್ಯೂರೋ ಆಸ್ಪತ್ರೆಯಲ್ಲಿ ಎಪ್ರಿಲ್ 2ರಂದು ವ್ಯಕ್ತಿಯೊಬ್ಬರಿಗೆ ಸೊಂಕು ಕಾಣಿಸಿಕೊಂಡಿದ್ದು ಎಪ್ರಿಲ್ 19ರಂದು ಅವರು ಸಾವನ್ನಪ್ಪಿದ್ದಾರೆ. ಹೀಗಾಗಿ ಎಪ್ರಿಲ್ ತಿಂಗಳಿನಲ್ಲಿ ಅಲ್ಲಿಗೆ ತೆರಳಿದ ಎಲ್ಲರ ತಪಾಸಣೆ ಅಗತ್ಯ ಎಂದರು.
ಎಪ್ರಿಲ್ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಮೂರು ಕುಟುಂಬದವರು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಮಾಹಿತಿ ಇದೆ. ಅವರ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇನ್ನು ಯಾರಾದರೂ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರೆ ಸ್ವಯಂ ಪ್ರೇರಣೆಯಿಂದ ತಪಾಸಣೆಗೆ ಒಳಗಾಗಬೇಕು ಎಂದು ಸೂಚಿಸಿದರು.
ಕಾರವಾರದಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳು ಇದೆ. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ಆರೋಗ್ಯ ಕಾರ್ಯಕರ್ತರಿಗೆ ಎಲ್ಲರೂ ಸರಿಯಾದ ಮಾಹಿತಿ ನೀಡುವಂತೆ ಮನವಿ ಮಾಡಿದರು. ಹೊಸದಾಗಿ ಸೊಂಕು ಪತ್ತೆಯಾದವರಿಗೆ ಸೊಂಕು ತಗುಲಿ 17 ದಿನಗಳಾಗಿವೆ. ರೋಗದ ಮೂಲ ಗೊತ್ತಾದ ಕಾರಣ ಆತಂಕ ಬೇಡ ಎಂದರು.
ಭಟ್ಕಳದಲ್ಲಿ ಪೊಲೀಸ್ ಭದ್ರತೆ ಇನ್ನಷ್ಟು ಬೀಗಿ: ಭಟ್ಕಳದಲ್ಲಿ ಪೊಲೀಸ್ ಭದ್ರತೆ ಇನ್ನಷ್ಟು ಬಿಗಿ ಮಾಡುವ ಅನಿವಾರ್ಯತೆ ಇದೆ. ಮೊದಲ 12 ಸೊಂಕಿತರು ಚೇತರಿಕೆ ಆದ ನಂತರ ಭಟ್ಕಳದಲ್ಲಿ 21ನೇ ದಿನ ಮತ್ತೆ ಸೊಂಕು ಪತ್ತೆಯಾಗಿದೆ. ಹೀಗಾಗಿ ಪೊಲೀಸ್ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತದೆ. ಭಟ್ಕಳದಲ್ಲಿ ಇನ್ನಷ್ಟು ಬಿಗು ಮಾಡಲಾಗುತ್ತದೆ. ಇದಕ್ಕೆ ಜನ ಸಹಕರಿಸಬೇಕು ಎಂದರು. ಮೊದಲ ಬಾರಿಗೆ ಸೋಂಕು ಬಂದಾಗ ಮೂಲ ತಿಳಿದಿರಲಿಲ್ಲ. ಈಗ ಪ್ರಕರಣದ ಮೂಲ ತಿಳಿದು ಬಂದಿದ್ದರಿಂದ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಸಿದ್ಧಗೊಂಡಿದೆ. ಉಳಿದ 55 ಜನರ ವರದಿ ಶನಿವಾರ ಬರಲಿದೆ ಎಂದರು.
ಭಟ್ಕಳ ಹೊರತುಪಡಿಸಿ ಜಿಲ್ಲೆಯ ಉಳಿದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಗಳಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ನಿಯಮಗಳನ್ನು ಯಥಾವತ್ತಾಗಿ ಅನುಸರಿಸಲಾಗುವುದು. ವಿದೇಶ ಹಾಗೂ ಹೊರರಾಜ್ಯಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಬರುವವರನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳ ಅನ್ವಯ ಕ್ವಾರಂಟೈನ್ ಮಾಡಲಾಗುವುದು. ಸಾರ್ವಜನಿಕರು ಹೊರಗಿನಿಂದ ಬಂದವರನ್ನು ಅಸ್ಪೃಶ್ಯರಂತೆ ಕಾಣಬಾರದು ಎಂದು ಕೋರಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ. ರೋಷನ್ ಅವರು ಮಾತನಾಡಿ, ಸೋಂಕಿತರನ್ನು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್-19ಗೆ ಶಿಪ್ಟ್ ಮಾಡಲಾಗುತ್ತಿದೆ. ಅವರಿಗೆ ವೈದ್ಯಕೀಯ ಸೇವೆ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು. ಸಾರ್ವಜನಿಕರು ಆರೋಗ್ಯ ಸಮೀಕ್ಷೆಯಲ್ಲಿ ಭಾಗಿಯಾಗಿ ಮಾಹಿತಿ ನೀಡಬೇಕು. ಜಿಲ್ಲಾಸ್ಪತ್ರೆಯಲ್ಲಿ ಸ್ಥಾಪಿಸಲಾದ ಕೊರೋನ ವಾರ್ಡ್ ಗೆ ಎಲ್ಲ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಇಂದು ಟಿವಿ, ಪ್ರಿಡ್ಜ್, ವಾಶಿಂಗ್ ಮಿಷನ್ ಸೇರಿದಂತೆ ಹಲವು ಉಪಕರಣಗಳನ್ನು ವಾರ್ಡ್ನಲ್ಲಿ ಅಳವಡಿಸಲಾಗಿದೆ. ರೋಗಿಗಳಿಗೆ ಬೇಸರವಾಗದಂತೆ ನೋಡಿಕೊಳ್ಳಲು ವೈಫೈ ವ್ಯವಸ್ಥೆ ಮಾಡಲಾಗಿದೆ ಎಂದರು. ಸರ್ಕಾರ ಅನುಮತಿ ನೀಡಿದಲ್ಲಿ 5 ತಿಂಗಳ ಮಗುವಿನ ಪಾಸ್ಮಾ ಮೂಲಕ ಚಿಕಿತ್ಸೆ ನೀಡಲು ಚಿಂತಿಸಲಾಗಿದೆ ಎಂದರು.
ಭಟ್ಕಳದಲ್ಲಿ ಪೊಲೀಸ್ ಭದ್ರತೆಯನ್ನು ಇನ್ನಷ್ಟು ಬಿಗಿ ಮಾಡುವ ದೃಷ್ಟಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಭಟ್ಕಳದಲ್ಲೇ ಇದ್ದು ಕ್ರಮದ ಬಗ್ಗೆ ವ್ಯವಸ್ಥೆ ಮಾಡುತ್ತಿದ್ದಾರೆ. ಜನರ ಸುರಕ್ಷತೆ ದೃಷ್ಟಿಯಿಂದ ಜನ ಸಹಕರಿಸಬೇಕು.
-ಡಾ. ಹರೀಶಕುಮಾರ್ ಕೆ., ಜಿಲ್ಲಾಧಿಕಾರಿ
ಗುರುವಾರ ಕಾರವಾರ ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿರುವ ಕೊರೋನ ಸೋಂಕಿತೆಯ ಜೊತೆ ಮಾತನಾಡಿ ಬಂದಿದ್ದೇನೆ. ಅವರು ಆರೋಗ್ಯವಾಗಿದ್ದಾರೆ. ಭಟ್ಕಳದಲ್ಲಿ ದೃಢಗೊಂಡ ಪ್ರಕರಣದ ಎಲ್ಲರೂ ಆರೋಗ್ಯವಾಗಿದ್ದಾರೆ. ಶೀಘ್ರವೇ ಕೊರೋನ ಮುಕ್ತರಾಗುತ್ತಾರೆ ಎನ್ನುವ ವಿಶ್ವಾಸ ಇದೆ.
-ಎಂ. ರೋಷನ್, ಜಿಪಂ ಸಿಇಒ







