ಹೂ ಸುರಿಯುವುದು ಮಾತ್ರವಲ್ಲ, ವಲಸೆ ಕಾರ್ಮಿಕರಿಗೆ ನೆರವಾಗಲು ಸೇನೆಗೆ ಸೂಚಿಸಬೇಕಿತ್ತು
ಮಾಜಿ ನೌಕಾಪಡೆ ಮುಖ್ಯಸ್ಥ ಅರುಣ್ ಪ್ರಕಾಶ್

ಫೋಟೊ ಕೃಪೆ: thewire.in
ಹೊಸದಿಲ್ಲಿ, ಮೇ 8: ಕೊರೋನ ವಾರಿಯರ್ಸ್ಗೆ ಫೈಪಾಸ್ಟ್ ಮತ್ತು ಅವರ ಮೇಲೆ ಪುಷ್ಪವೃಷ್ಟಿಗೈಯುವ ಮೂಲಕ ಗೌರವ ಸಲ್ಲಿಸಿದ ಸೇನೆಯು ಇದನ್ನು ಮೀರಿ, ನಿರ್ದಿಷ್ಟವಾಗಿ ವಲಸೆ ಕಾರ್ಮಿಕರಿಗೆ ನೆರವಾಗಲು ಹೆಚ್ಚಿನದನ್ನು ಮಾಡಬಹುದಿತ್ತು ಎಂದು ಭಾರತಿಯ ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಅರುಣ್ ಪ್ರಕಾಶ ಅವರು ಹೇಳಿದ್ದಾರೆ.
ಸುದ್ದಿ ಜಾಲತಾಣ Thewire.in ಗಾಗಿ ಕರಣ್ ಥಾಪರ್ ಅವರಿಗೆ ನೀಡಿರುವ ಸಂದರ್ಶನದಲ್ಲಿ ಪ್ರಕಾಶ್ ಕೆಲವು ಮಾತುಗಳನ್ನಾಡಿದ್ದಾರೆ. ಇದು ಕೊರೋನ ವೈರಸ್ ಪಿಡುಗು ಮತ್ತು ಲಾಕ್ಡೌನ್ ಆರಂಭಗೊಂಡ ಬಳಿಕ ಸಶಸ್ತ್ರ ಪಡೆಗಳ ಮಾಜಿ ಮುಖ್ಯಸ್ಥರೋರ್ವರು ಮಾಧ್ಯಮಗಳಿಗೆ ನೀಡಿರುವ ಮೊದಲ ಸಂದರ್ಶನವಾಗಿದೆ.
ಕೋವಿಡ್-19ನ ಸಮಯದಲ್ಲಿ ಸರಕಾರವು ಸೇನೆಯ ನೆರವನ್ನು ಪಡೆಯಬೇಕಾಗಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್, ಸಶಸ್ತ್ರ ಪಡೆಗಳು ಸಾಕಷ್ಟು ಸಂಪನ್ಮೂಲಗಳು ಮತ್ತು ಸಂಘಟನೆಯನ್ನು ಹೊಂದಿವೆ. ಸರಕಾರವು ಅವುಗಳಿಗೆ ಕೇವಲ ಸೂಚನೆಯನ್ನು ನೀಡಿದರೆ ಸಾಕಿತ್ತು. ವಿಶೇಷವಾಗಿ ಭಾರತೀಯ ನಾಗರಿಕರು ಸಂಕಷ್ಟದಲ್ಲಿ ಸಿಲುಕಿರುವಾಗ ಸೇನೆಯನ್ನು ಬಳಸಿಕೊಳ್ಳಬೇಕಾಗಿತ್ತು ಎಂದರು.
ಯೋಧರಿಗೆ ಎದುರಾಗುವ ಕೋವಿಡ್-19 ಅಪಾಯ ಮತ್ತು ತನ್ನ ಪ್ರಜೆಗಳಿಗೆ ನೆರವಾಗುವ ಅಗತ್ಯ ಇವುಗಳ ಮಧ್ಯೆ ಸರಕಾರವು ಸಮತೋಲನ ಸಾಧಿಸಬೇಕಾಗುತ್ತದೆ ಎಂದು ಒಪ್ಪಿಕೊಂಡ ಅವರು,ಆದರೆ ಹಾಗೆ ಮಾಡಿದರೆ ಅದು ಮೌಲಿಕವಾಗಿರುತ್ತಿತ್ತು ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಭಾರತವು ಎರಡೆರಡು ಶತ್ರುಗಳನ್ನು ಎದುರಿಸಲು ಸಾಧ್ಯವಿಲ್ಲ ಮತ್ತು ಅದು ಚಾಣಕ್ಯ ನೀತಿಯನ್ನು ಅನುಸರಿಸಬೇಕು ಮತ್ತು ಒಂದರೊಂದಿಗೆ ಶಾಂತಿಯನ್ನು ಮಾಡಿಕೊಳ್ಳಬೇಕು. ಪಾಕಿಸ್ತಾನವು ಕೇವಲ ಚೀನಾದ ಕೈಗೊಂಬೆಯಾಗಿದೆ. ಚೀನಾ ನಮ್ಮ ಪ್ರಮುಖ ಶತ್ರುವಾಗಿದೆ ಮತ್ತು ಅದರೊಂದಿಗೆ ಶಾಂತಿ-ಸೌಹಾರ್ದದ ಸಂಬಂಧವನ್ನು ಹೊಂದಿರುವುದು ಜಾಣತನವಾಗುತ್ತದೆ’ ಎಂದರು.
ಕೊರೋನ ವಾರಿಯರ್ಸ್ಗಾಗಿ ಫ್ಲೈ ಪಾಸ್ಟ್ ಮತ್ತು ಪುಷ್ಪವೃಷ್ಟಿಯನ್ನು ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ಮತ್ತು ಮೂರೂ ಸಶಸ್ತ್ರಪಡೆಗಳ ಮುಖ್ಯಸ್ಥರು ಖುದ್ದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸುವ ಅಗತ್ಯವಿತ್ತೇ ಎಂಬ ಪ್ರಶ್ನೆಗೆ ಪ್ರಕಾಶ್ ಅವರು,ಅಷ್ಟೊಂದು ಮಹತ್ವದ್ದಲ್ಲದ ಇಂತಹ ವಿಷಯಗಳನ್ನು ಪ್ರಕಟಿಸಲು ಸಿಡಿಎಸ್ ಮತ್ತು ಸಶಸ್ತ್ರ ಪಡೆಗಳ ಮುಖ್ಯಸ್ಥರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗುವ ಅಗತ್ಯವಿರಲಿಲ್ಲ. ಈ ಬಗ್ಗೆ ಪ್ರಕಟಣೆಯನ್ನು ಬೇರೆ ರೀತಿಯಲ್ಲಿ ಹೊರಡಿಸಬಹುದಿತ್ತು ಎಂದು ಉತ್ತರಿಸಿದರು.
ಪಾಕಿಸ್ಥಾನವು ಕೋವಿಡ್-19 ಸೋಂಕಿತ ಜನರನ್ನು ಭಾರತದೊಳಕ್ಕೆ ತಳ್ಳುತ್ತಿದೆ ಎಂಬ ಇಬ್ಬರು ಹಿರಿಯ ಸೇನಾಧಿಕಾರಿಗಳ ಹೇಳಿಕೆಗಳ ಕುರಿತಂತೆ ಪ್ರಕಾಶ್ ಅವರು, ಇದು ಕೊಂಚ ಅತಿಶಯೋಕ್ತಿಯಾಗಿ ಕಾಣಿಸುತ್ತಿದೆ. ಕೊರೋನ ವೈರಸ್ ಸೋಂಕು ಪೀಡಿತ ವ್ಯಕ್ತಿಗೆ ಎತ್ತರದ ಪರ್ವತ ಮಾರ್ಗಗಳನ್ನು ಹತ್ತಲು ಸಾಧ್ಯವಿಲ್ಲ. ಅಲ್ಲದೆ ಪಾಕಿಸ್ತಾನವು ಇಂತಹ ಜೈವಿಕ ಯುದ್ಧವನ್ನು ಆರಂಭಿಸುವ ಸಾಧ್ಯತೆಯು ಕಂಡುಬರುತ್ತಿಲ್ಲ ಎಂದು ಹೇಳಿದರು.
ಮಿಲಿಟರಿ ಬಜೆಟ್ನಲ್ಲಿ ಕಡಿತ ಮಾಡಿರುವುದು ಸಶಸ್ತ್ರ ಪಡೆಗಳ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಪ್ರಶ್ನೆಗೆ ಪ್ರಕಾಶ್, ಸಶಸ್ತ್ರ ಪಡೆಗಳ ಗಾತ್ರವನ್ನು ಕಡಿಮೆ ಮಾಡುವ ಅಗತ್ಯವಿದೆ. ಸಶಸ್ತ್ರ ಪಡೆಗಳು ಅತಿಯಾಗಿ ಮಾನವ ಬಲವನ್ನೇ ನಂಬಿಕೊಂಡಿವೆ. ಮಾನವ ಬಲದಿಂದ ತಂತ್ರಜ್ಞಾನಕ್ಕೆ ಬದಲಾಗಲು ಇದು ಸಕಾಲವಾಗಿದೆ. ಇದು ಮಿಲಿಟರಿ ಸುಧಾರಣೆಗಳನ್ನು ತರಬೇಕಾದ ಸಮಯವಾಗಿದೆ ಎಂದು ಉತ್ತರಿಸಿದರು.







