ಸಂಕಷ್ಟದಲ್ಲಿರುವ ಬೀಡಿಕಾರ್ಮಿಕರಿಗೆ ನೆರವು: ರಾಜ್ಯ-ಕೇಂದ್ರ ಸರ್ಕಾರಗಳಿಗೆ ಸಂಘ ಒತ್ತಾಯ
ಉಡುಪಿ, ಮೇ 8: ರಾಜ್ಯದಲ್ಲಿ ಬೀಡಿ ಕೈಗಾರಿಕೆಯಲ್ಲಿ 8-9 ಲಕ್ಷ ಬೀಡಿ ಕಾರ್ಮಿಕರಿದ್ದು, ಇವರು ರಾಜ್ಯದ 23 ಜಿಲ್ಲೆಗಳಲ್ಲಿ ಹರಡಿಕೊಂಡಿದ್ದಾರೆ. ಈ ಉದ್ಯಮದಲ್ಲಿ ಒಂಟಿ ಮಹಿಳೆಯರು, ವಿಧವೆಯರು, ಸಂಸಾರದ ನಿರ್ವಹಣೆಯ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತ ಲಕ್ಷಗಟ್ಟಲೆ ಮಹಿಳೆಯರು ಇದ್ದಾರೆ.
ಇವರೆಲ್ಲರೂ ಬೀಡಿ ಗುತ್ತಿಗೆದಾರರು/ಏಜೆಂಟರಿಂದ ಬೀಡಿಎಲೆ ಮತ್ತು ತಂಬಾಕು ಪಡೆದು ತಮ್ಮ ತಮ್ಮ ಮನೆಗಳಲ್ಲಿ ಬೀಡಿಯನ್ನು ಸುತ್ತಿ ಮತ್ತೆ ಗುತ್ತಿಗೆದಾರ/ಏಜೆಂಟರಿಗೆ ನೀಡಿ ಕೂಲಿ ಪಡೆಯುವ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಕಳೆದ ಎರಡು ತಿಂಗಳುಗಳಿಂದ ಕೂಲಿಯೂ ಸಿಗದೆ, ಕಟ್ಟಿದ ಬೀಡಿಯನ್ನು ಪಡೆಯದ ಏಜೆಂಟರು ಕೂಲಿಯನ್ನು ನೀಡದ ಕಾರಣ ಬೀಡಿ ಕಾರ್ಮಿಕರೀಗ ಅತೀವ ಸಂಕಷ್ಟದಲ್ಲಿದ್ದಾರೆ.
ಬೀಡಿ ಕಾರ್ಮಿಕರ ಕುಟುಂಬ ನಿರ್ವಹಣೆಗೆ ಬೇಕಾಗಿ ಮಾಲಕರು ಮತ್ತು ಸರಕಾರ ಜಂಟಿಯಾಗಿ ದಿನವೊಂದಕ್ಕೆ 200 ರೂ. ಒಂದು ತಿಂಗಳ ಭತ್ಯೆ ಆರು ಸಾವಿರ ರೂ.ಗಳನ್ನು ಎಲ್ಲಾ ಬೀಡಿ ಕಾರ್ಮಿಕರಿಗೆ ನೀಡುವಂತೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ (ಸಿಐಟಿಯು) ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಈ ಕುರಿತು ರಾಜ್ಯ ಮುಖ್ಯಮಂತ್ರಿಗಳು, ರಾಜ್ಯ ಕಾರ್ಮಿಕ ಸಚಿವರಿಗೆ ಹಾಗು ರಾಜ್ಯ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಬೇಡಿಕೆಯ ಮನವಿಯನ್ನು ಈಮೇಲ್ ಮೂಲಕ ಸಲ್ಲಿಸಿರುವ ಫೆಡರೇಷನ್, ಕಾರ್ಮಿಕ ಸಚಿವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ರಾಜ್ಯದಲ್ಲಿರುವ ಬೀಡಿ ಕಾರ್ಮಿಕರ ಸಂಕಷ್ಷಗಳನ್ನು ಮನವರಿಕೆ ಮಾಡಿಕೊಟ್ಟಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಅದರೂ ರಾಜ್ಯ ಸರಕಾರ ಘೋಷಿಸಿರುವ ಅಸಂಘಟಿತರ ಪರಿಹಾರ ಪ್ಯಾಕೇಜ್‌ನಲ್ಲಿ ಬೀಡಿ ಕಾರ್ಮಿಕರನ್ನು ಸೇರಿಸದಿರುವುದನ್ನು ಸಂಘವು ಖಂಡಿಸಿದೆ.
ಬೀಡಿ ವರ್ಕರ್ಸ್ ವೇಲ್‌ಫೇರ್ ಪಂಡ್ ಅಸ್ಥಿತ್ವದಲ್ಲಿದೆ. ಅಲ್ಲದೇ ಸಾವಿರಾರು ಕೋಟಿ ರೂ. ಆದಾಯವನ್ನು ಕಳೆದ 40 ವರ್ಷಗಳಿಂದ ನಿರಂತರವಾಗಿ ಕೇಂದ್ರ ಸರಕಾರ ಪಡೆದಿದೆ.ಈ ನಿಧಿಯಲ್ಲಿ ಸಹ ಪರಿಹಾರ ನೀಡಲು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ಜೊತೆ ಸಂಯೋಜಿಸಿಕೊಂಡು ಬೀಡಿ ಕಾರ್ಮಿಕರಿಗೆ ಮಾಸಿಕ 6,000ರೂ.ನಂತೆ ನೆರವು ನೀಡುವಂತೆ ಕರ್ನಾಟಕ ರಾಜ್ಯ ಬೀಡಿ ಕಾರ್ಮಿಕರ ಫೆಡರೇಷನ್ ರಾಜ್ಯ ಸಮಿತಿ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.







