ಇನ್ನೂ 30 ಬಿಎಸ್‌ಎಫ್ ಸಿಬ್ಬಂದಿಗಳಲ್ಲಿ ಕೋವಿಡ್-19 ಸೋಂಕು ಪತ್ತೆ: ಒಟ್ಟು ಪ್ರಕರಣಗಳ ಸಂಖ್ಯೆ 223ಕ್ಕೆ ಏರಿಕೆ

ಹೊಸದಿಲ್ಲಿ, ಮೇ 8: ಇನ್ನೂ 30 ಬಿಎಸ್‌ಎಫ್ ಸಿಬ್ಬಂದಿಗಳಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ದೇಶದ ಗಡಿಗಳನ್ನು ಕಾಯುವ ಹೊಣೆ ಹೊತ್ತಿರುವ ಈ ಪಡೆಯಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 223ಕ್ಕೇರಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು. ಈ ಪೈಕಿ ಇಬ್ಬರು ಗುಣಮುಖರಾಗಿದ್ದರೆ ಇತರ ಇಬ್ಬರು ಮೃತಪಟ್ಟಿದ್ದಾರೆ.
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಗಳಲ್ಲಿ ವರದಿಯಾಗಿರುವ 500ಕ್ಕೂ ಅಧಿಕ ಸಕ್ರಿಯ ಕೊರೋನ ವೈರಸ್ ಪ್ರಕರಣಗಳಲ್ಲಿ ಬಿಎಸ್‌ಎಫ್ ಸಿಂಹಪಾಲು ಹೊಂದಿದೆ.
ದಿಲ್ಲಿಯಿಂದ ಆರು ಮತ್ತು ತ್ರಿಪುರಾದ ಧಲಾಯಿ ಜಿಲ್ಲೆಯ ಅಂಬಾಸಾದಲ್ಲಿರುವ 86ನೇ ಬಟಾಲಿಯನ್‌ನ ಕೇಂದ್ರ ಕಚೇರಿಯಿಂದ 24 ಪ್ರಕರಣಗಳು ಸೇರಿದಂತೆ ಹೊಸದಾಗಿ ಒಟ್ಟು 30 ಪ್ರಕರಣಗಳು ವರದಿಯಾಗಿವೆ. ದಿಕ್ಕಿಯ ಆರು ಪ್ರಕರಣಗಳ ಪೈಕಿ ಇಬ್ಬರು ಬಿಎಸ್‌ಎಫ್ ಕೇಂದ್ರಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು,ಇತರ ನಾಲ್ವರು ನಗರದಲ್ಲಿಯ ಇತರ ಘಟಕಗಳಲ್ಲಿ ನಿಯೋಜಿತರಾಗಿದ್ದರು. ಎಲ್ಲ ಸೋಂಕಿತರನ್ನು ಏಮ್ಸ್-ಝಜ್ಜರ್ ಮತ್ತು ಅಗರ್ತಲಾದ ಜಿ.ಬಿ.ಪಂತ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಿಎಸ್‌ಎಫ್ ವಕ್ತಾರ ಶುಭೇಂದು ಭಾರದ್ವಾಜ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ಇಬ್ಬರು ಸಿಬ್ಬಂದಿಗಳಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ದಿಲ್ಲಿಯ ಲೋಧಿ ರಸ್ತೆಯಲ್ಲಿರುವ ಎಂಟು ಅಂತಸ್ತುಗಳ ಬಿಎಸ್‌ಎಫ್ ಮುಖ್ಯಕಚೇರಿಯ ಎರಡು ಅಂತಸ್ತುಗಳನ್ನು ಸೀಲ್ ಮಾಡಲಾಗಿತ್ತು. ಈಗ ಹೊಸದಾಗಿ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಇನ್ನೂ ಒಂದು ಅಂತಸ್ತನ್ನು ಸೀಲ್ ಮಾಡಲಾಗಿದೆ. ಮುಖ್ಯಕಚೇರಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎಸ್‌ಐ ದರ್ಜೆಯ ಅಧಿಕಾರಿಯೋರ್ವರು ಇತ್ತೀಚಿಗೆ ಕೊರೋನ ವೈರಸ್ ರೋಗದಿಂದ ಮೃತಪಟ್ಟಿದ್ದರು.







