ನಿಝಾಮುದ್ದೀನ್ ವಿಚಾರದಲ್ಲಿ ಮಾಧ್ಯಮಗಳ ವಿರುದ್ಧ ಕ್ರಮಕ್ಕೆ ಕೋರಿ ಅರ್ಜಿ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 8: ಹೊಸದಿಲ್ಲಿಯ ನಿಝಾಮುದ್ದೀನ್ನ ತಬ್ಲೀಗಿ ಜಮಾಅತ್ ಸಭೆಯಿಂದ ಕೊರೋನ ಸೋಂಕು ಹರಡಿದೆ ಎನ್ನುವಂತಹ ಕೋಮು ಸಂಘರ್ಷದ ಭಾಷೆಗಳನ್ನು ಬಳಸಿದ್ದ ಮುದ್ರಣ ಮಾಧ್ಯಮ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಸೂಕ್ತ ಕ್ರಮಕ್ಕೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ.
ಈ ಕುರಿತು ಜನಾಧಿಕಾರ ಸಂಘರ್ಷ ಪರಿಷತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಜನಾಧಿಕಾರ ಸಂಘರ್ಷ ಪರಿಷತ್ ವ್ಯವಸ್ಥಾಪಕ ಟ್ರಸ್ಟಿ ಆದರ್ಶ ಆರ್. ಅಯ್ಯರ್ ಅವರು ವಾದಿಸಿ, ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್(ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಕೋಮು ಸಂಘರ್ಷದ ಭಾಷೆಗಳನ್ನು ಬಳಸಿದ ಮುದ್ರಣ ಮಾಧ್ಯಮ ಹಾಗೂ ಇಲೆಕ್ಟ್ರಾನಿಕ್ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲ. ಅಲ್ಲದೆ, ಕೋಮು ಸಂಘರ್ಷದ ಭಾಷೆ ಬಳಸುವುದೂ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶಗಳಿಗೆ ಸಂಪೂರ್ಣ ವಿರೋಧವಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ವಕೀಲರ ವಾದ ಆಲಿಸಿದ ನ್ಯಾಯಪೀಠವು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೇರಿ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿಗೊಳಿಸಿತು.







