ಹೊರ ರಾಜ್ಯದಲ್ಲಿರುವ ಕನ್ನಡಿಗರಿಗೆ ರಾಜ್ಯ ಸರಕಾರ ನೆರವಾಗಲಿ: ಮಾಜಿ ಸಚಿವ ರಮಾನಾಥ ರೈ ಆಗ್ರಹ

ಬಂಟ್ವಾಳ, ಮೇ 8: ಮಹಾರಾಷ್ಟ್ರದ ಮುಂಬೈ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲಾಕ್‍ಡೌನ್‍ನಿಂದ ಬಾಕಿಯಾಗಿ ಸಂಕಷ್ಟದಲ್ಲಿರುವ ಕನ್ನಡಿಗರು ತಮ್ಮ ತಮ್ಮ ಊರಿಗೆ ಮರಳಲು ಅವಕಾಶ ಮಾಡಿಕೊಡಬೇಕು ಹಾಗೂ ಊರಿಗೆ ಮರಳಿದ ಅವರಿಗೆ ಎಲ್ಲಾ ರೀತಿಯ ಸುರಕ್ಷಾ ಕ್ರಮಗಳಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾವಿರಾರು ಕನ್ನಡಿಗರು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ಹಲವಾರು ವರ್ಷಗಳಿಂದ ಉದ್ಯೋಗ ಮಾಡುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಕೊರೋನ ವೈರಸ್ ಹರಡುವುದನ್ನು ತಡೆಗಟ್ಟಲು ದೇಶದಲ್ಲಿ ದಿಢೀರ್ ಆಗಿ ಲಾಕ್‍ಡೌನ್ ಘೋಷಣೆ ಮಾಡಿರುವುದರಿಂದ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕಷ್ಟಕ್ಕೆ ಸ್ಪಂದಿಸುವುದು ರಾಜ್ಯ ಸರಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿರುವ ಕನ್ನಡಿಗರಿಗೆ ಊರಿಗೆ ಬರಲು ಅನುಮತಿ ನೀಡಬೇಕು. ಊರಿಗೆ ಬರಲು ಬಸ್ಸಿನ ವ್ಯವಸ್ಥೆಗಳನ್ನು ಅವರೇ ಮಾಡಿದ್ದಾರೆ. ಊರಿಗೆ ಬರುವ ವೇಳೆ ಅವರ ಆರೋಗ್ಯ ತಪಾಸನೆ, ಬಂದ ಬಳಿಕ ಇಲ್ಲಿ ಕ್ವಾರಂಟೈನ್ ಸೇರಿದಂತೆ ಎಲ್ಲಾ ರೀತಿಯ ವ್ಯವಸ್ಥೆಗಳಲ್ಲಿ ಸರಕಾರ ಮಾಡಬೇಕು. ಮಹಾರಾಷ್ಟ್ರದಲ್ಲಿರುವ ಹಲವಾರು ಕನ್ನಡಿಗರು ನನಗೆ ಕರೆ ಮಾಡಿ ತಮ್ಮ ಸಂಕಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲದೆ ರಾಜ್ಯದ ಪ್ರಮುಖರಿಗೂ ಕರೆ ಮಾಡಿ ಕರ್ನಾಟಕಕ್ಕೆ ಬರಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಸರಕಾರ ಈ ಕುರಿತು ಗಮನ ಹರಿಸಿ ಶೀಘ್ರವೇ ವ್ಯವಸ್ಥೆ ಮಾಡಬೇಕು ಎಂದು ರಮಾನಾಥ ರೈ ಒತ್ತಾಯಿಸಿದ್ದಾರೆ.
ಮಹಾರಾಷ್ಟ್ರದಂತೆ ಇತರ ಹೊರ ರಾಜ್ಯಗಳಲ್ಲಿಯೂ ಇರುವ ಕನ್ನಡಿಗರಿಗೂ ರಾಜ್ಯ ಸರಕಾರ ನೆರವಾಗಬೇಕು. ಹೊರ ರಾಜ್ಯಗಳಲ್ಲಿ ಇರುವ ಎಲ್ಲಾ ಕನ್ನಡಿಗರನ್ನು ತಪಾಸನೆಗೆ ಒಳಪಡಿಸಿ ಕರೆದುಕೊಂಡು ಬಂದ ಬಳಿಕ ಕ್ವಾರಂಟೈನ್‍ನಲ್ಲಿ ಇಡುವ ಕಾರ್ಯವನ್ನು ಮಾಡಬೇಕು ರಮಾನಾಥ ರೈ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.







