ದೇಶದ ಬೃಹತ್ ಫಾರ್ಮಾಸ್ಯೂಟಿಕಲ್ ಕಂಪೆನಿಯ 21 ಉದ್ಯೋಗಿಗಳಿಗೆ ಕೊರೋನ

ಅಹ್ಮದಾಬಾದ್,ಮೇ 8: ತನ್ನ 26 ಮಂದಿ ಉದ್ಯೋಗಿಗಳಿಗೆ ಕೊರೋನ ಸೋಂಕು ದೃಢಪಟ್ಟಿದ್ದರಿಂದ ದೇಶದ ಬೃಹತ್ ಫಾರ್ಮಾಸ್ಯೂಟಿಕಲ್ ಕಂಪೆನಿ ‘ಕ್ಯಾಡಿಲ್ಲಾ’ ಅಹ್ಮದಾಬಾದ್‌ನಲ್ಲಿರು ತನ್ನ ಔಷಧಿ ತಯಾರಿಕಾ ಘಟಕವನ್ನು ಮುಚ್ಚುಗಡೆಗೊಳಿಸಿದೆ.
ಕ್ಯಾಡಿಲಾ ಫಾರ್ಮಾಸ್ಯೂಟಿಕಲ್ಸ್‌ನ ಅಹ್ಮದಾಬಾದ್ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಐವರು ಉದ್ಯೋಗಿಗಳಿಗೆ ಸೋಂಕು ತಗಲಿರುವುದು ದೃಢಪಟ್ಟಿತ್ತು. ಈ ವಾರ ಮತ್ತೆ 21 ಮಂದಿಗೆ ಕೊರೋನ ಪಾಸಿಟಿವ್ ಬಂದಿರುವುದಾಗಿ ಮೂಲಗಳು ತಿಳಿಸಿವೆ.
‘‘ ಮೇ 5ರಂದು ನಾವು 30 ಉದ್ಯೋಗಿಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿದ್ದೆವು ಅವರಲ್ಲಿ 21 ಮಂದಿಗೆ ಸೋಂಕು ತಗಲಿರುವುದು ಮರು ದಿನ ಲಭ್ಯವಾದ ಪರೀಕ್ಷಾ ವರದಿಯಲ್ಲಿ ತಿಳಿದುಬಂದಿದೆಯೆಂದು ಅಹ್ಮದಾಬಾದ್ ಜಿಲ್ಲಾಭಿವೃದ್ಧಿ ಅಧಿಕಾರಿ ಮಹೇಶ್ ಬಾಬು ತಿಳಿಸಿದ್ದಾರೆ. ಔಷಧಿ ತಯಾರಿಕಾ ಘಟಕವು ಮುಚ್ಚುಗಡೆ ಗೊಂಡಿರುವ ಹಿನ್ನೆಲೆಯಲ್ಲಿ 95 ಉದ್ಯೋಗಿಗಳನ್ನು ಕ್ವಾರಂಟೈನಲ್ಲಿರಿಸಲಾಗಿದೆ ಹಾಗೂ ನೈರ್ಮಲೀಕರಣ ಕಾರ್ಯವನ್ನು ಆರಂಭಿಸಲಾಗಿದೆ.
ತನ್ನ ಕೆಲವು ಉದ್ಯೋಗಿಗಲ್ಲಿ ಕೋವಿಡ್-19 ರೋಗದ ಲಕ್ಷಣಗಳು ಕಂಡುಬಂದಿದ್ದರೂ, ಕಂಪೆನಿಯು ಅಗತ್ಯವಿರುವ ಕ್ರಮಗಳನ್ನು ಅನುಸರಿಸುತ್ತಿಲ್ಲವೆಂದು ಮಹೇಶ್ ಬಾಬು ಆರೋಪಿಸಿದ್ದಾರೆ.
ಅಹ್ಮದಾಬಾದ್ ನಗರವು ದೇಶದಲ್ಲಿ ಕೋವಿಡ್-19 ಹಾವಳಿಯಿಂದ ತೀವ್ರವಾಗಿ ಪೀಡಿತವಾದ ನಗರಗಳಲ್ಲೊಂದಾಗಿದ್ದು, ಅಲ್ಲಿ ಈವರೆಗೆ 317ಮಂದಿ ಮೃತಪಟ್ಟಿದ್ದಾರೆ ಹಾಗೂ ಸೋಂಕಿತರ ಸಂಖ್ಯೆ 4912ಕ್ಕೇರಿದೆ.





