ಕೊರೋನ ಚಿಕಿತ್ಸೆಯಲ್ಲಿ ಮಲೇರಿಯ ಔಷಧಿ ವಿಫಲ: ಅಧ್ಯಯನ ವರದಿ

ವಾಶಿಂಗ್ಟನ್, ಮೇ 8: ನೋವೆಲ್-ಕೊರೋನ ವೈರಸ್ ವಿರುದ್ಧದ ಹೋರಾಟದ ಗತಿಯನ್ನೇ ಬದಲಿಸುವ (ಗೇಮ್ ಚೇಂಜರ್) ಚಿಕಿತ್ಸೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರಿಂದ ಬಣ್ಣಿಸಲ್ಪಟ್ಟಿರುವ ಮಲೇರಿಯ ಔಷಧಿಯು, ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ರೋಗಿಗಳ ಮೇಲೆ ಪರಿಣಾಮ ಬೀರಲು ಮತ್ತೊಮ್ಮೆ ವಿಫಲವಾಗಿದೆ ಎಂದು ಗುರುವಾರ ಬಿಡುಗಡೆ ಮಾಡಲಾದ ಅಧ್ಯಯನವೊಂದು ತಿಳಿಸಿದೆ.
ಕೋವಿಡ್-19 ರೋಗಿಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ನೀಡಿದರೂ ಕೃತಕ ಉಸಿರಾಟ ವ್ಯವಸ್ಥೆಯ ಅಗತ್ಯ ಮತ್ತು ಸಾವಿನ ಅಪಾಯ ಕಡಿಮೆಯಾಗಿಲ್ಲ ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟಗೊಂಡ ಅಧ್ಯಯನವೊಂದರಲ್ಲಿ ವೈದ್ಯರು ಹೇಳಿದ್ದಾರೆ.
ಈ ಔಷಧದ ಬಳಕೆಯಿಂದ ಸಾವಿನ ಅಪಾಯ ಕಡಿಮೆಯಾಗುತ್ತದೆ ಎನ್ನುವುದು ನಮಗೆ ಮನವರಿಕೆಯಾಗಿಲ್ಲ ಎಂದು ಪ್ರಧಾನ ಸಂಶೋಧಕ ಡಾ. ನೀಲ್ ಶ್ಲಗರ್ ರಾಯ್ಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದರು. ಈ ಔಷಧವನ್ನು ತೆಗೆದುಕೊಂಡ ರೋಗಿಗಳು ಚೇತರಿಸಿಕೊಂಡಂತೆ ಕಾಣುತ್ತಿಲ್ಲ ಎಂದರು.
ಹೈಡ್ರಾಕ್ಸಿಕ್ಲೋರೋಕ್ವಿನ್ ಪಡೆದ ರೋಗಿಗಳ ಪೈಕಿ 32.3 ಶೇಕಡ ಮಂದಿಗೆ ವೆಂಟಿಲೇಟರ್ ಒದಗಿಸುವುದು ಅನಿವಾರ್ಯವಾಯಿತು. ಅದೇ ವೇಳೆ, ಈ ಔಷಧ ನೀಡದವರ ಪೈಕಿ 14.9 ಶೇಕಡ ಮಂದಿಗೆ ವೆಂಟಿಲೇಟರ್‌ನ ಅಗತ್ಯ ಉಂಟಾಗಿದೆ ಎಂದು ವರದಿ ತಿಳಿಸಿದೆ.
ಅದೇ ವೇಳೆ, ಹೆಚ್ಚು ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳಿಗೆ ಈ ಔಷಧಿಯನ್ನು ನೀಡಲಾಗಿದೆ ಎಂಬುದನ್ನು ವೈದ್ಯರು ವರದಿಯಲ್ಲಿ ಗಣನೆಗೆ ತೆಗೆದುಕೊಂಡಿದ್ದಾರೆ. ಹಾಗಾಗಿ, ಔಷಧಿಯು ರೋಗಿಗಳಿಗೆ ಹಾನಿ ಮಾಡಿರುವ ಸಾಧ್ಯತೆಯಿಲ್ಲ, ಆದರೆ ಪ್ರಯೋಜನವೂ ಆಗಿಲ್ಲ ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ.







