ಬೈಸಿಕಲ್‌ನಲ್ಲಿ ಊರಿಗೆ ತೆರಳುತ್ತಿದ್ದ ವಲಸೆ ಕಾರ್ಮಿಕ ದಂಪತಿ ರಸ್ತೆ ಅವಘಡಕ್ಕೆ ಬಲಿ
ಹೊಸದಿಲ್ಲಿ, ಮೇ. 8: ಲಾಕ್‌ಡೌನ್ ಹಿನ್ನೆಲೆಯಲ್ಲಿ ಚತ್ತೀಸ್‌ಗಢದಲ್ಲಿರುವ ತನ್ನ ಊರಿಗೆ ಬೈಸಿಕಲ್‌ನಲ್ಲಿ ಪ್ರಯಾಣಿಸುತ್ತಿದ್ದ ವಲಸೆ ಕಾರ್ಮಿಕ ಹಾಗೂ ಆತನ ಪತ್ನಿ ಗುರುವಾರ ಬೆಳಗ್ಗೆ ಲಕ್ನೋದಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕೃಷ್ಣ ಸಾಹು ಹಾಗೂ ಆತನ ಪತ್ನಿ ಲಕ್ನೋದ ಶಹೀದ್‌ಪಥ್ ಬೈಪಾಸ್ ರಸ್ತೆಯಲ್ಲಿ ಮಕ್ಕಳೊಂದಿಗೆ ಸೈಕಲ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ವೇಗವಾಗಿ ಬರುತ್ತಿದ್ದ ಕಾರೊಂದು ಅವರಿಗೆ ಢಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ದಂಪತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾರೂ, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಮೂರು ವರ್ಷದ ಪುತ್ರ ಹಾಗೂ ನಾಲ್ಕು ವರ್ಷದ ಪುತ್ರಿಗೆ ಲಕ್ನೋದ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.
ದಂಪತಿಯ ಸಾವಿನ ಹಿನ್ನೆಲೆಯಲ್ಲಿ ಅವರ ಮಕ್ಕಳನ್ನು, ಸಾಹುವಿನ ಸೋದರನಿಗೆ ಒಪ್ಪಿಸಿದ್ದಾರೆ ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕನನ್ನು ಪತ್ತೆಹಚ್ಚುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.
ದಂಪತಿಯ ಮೃತದೇಹದ ಅಂತಿಮ ಕಾರ್ಯಗಳನ್ನು ನಡೆಸಲು ಅವರ ಕುಟುಂಬಕ್ಕೆ ಹಣಕಾಸಿನ ಸಮಸ್ಯೆ ಇದ್ದುದಿಂದ ಇತರ ವಲಸೆ ಕಾರ್ಮಿಕರು 15 ಸಾವಿರ ರೂ. ಒಟ್ಟುಗೂಡಿಸಿ ಅಂತ್ಯಸಂಸ್ಕಾರ ನಡೆಸಿದರು. ಲಕ್ನೋದ ಗುಲಾಲೆ ಘಾಟ್‌ನಲ್ಲಿ ದಂಪತಿಯ ಅಂತ್ಯಸಂಸ್ಕಾರ ನಡೆಸಲಾಯಿತು.
ಲಾಕ್‌ಡೌನ್ ಹೇರಿಕೆಯ ಬಳಿಕ ದುಡಿಮೆಯಿಲ್ಲದೆ ಕಂಗಾಲಾಗಿರುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಲಸೆ ಹೋಗುತ್ತಿದ್ದ ಸಂದರ್ಭದಲ್ಲಿ ದಣಿವು ಹಸಿವು, ಅನಾರೋಗ್ಯ ಮತ್ತು ಅವಘಡಗಳಿಂದ ಸಾವನ್ನಪ್ಪಿದ್ದಾರೆ.