ಭಾರತದಲ್ಲಿ ಭಿನ್ನಮತೀಯರ ವಿರುದ್ಧ ದಮನ ಕಾರ್ಯಾಚರಣೆ: ಬ್ರಿಟನ್ ವಿದ್ವಾಂಸರು

Safura Zargar
ಲಂಡನ್, ಮೇ 8: ಕೋವಿಡ್-19 ಬೀಗಮುದ್ರೆಯ ವೇಳೆ, ಭಿನ್ನಮತೀಯರು ಮತ್ತು ಪ್ರತಿಭಟನಕಾರರ ಮೇಲೆ ಭಾರತ ಸರಕಾರ ಅಮಾನುಷ ದಮನ ಕಾರ್ಯಾಚರಣೆ ನಡೆಸಿದೆ ಎಂದಿರುವ ಬ್ರಿಟನ್ನ 90 ವಿದ್ವಾಂಸರ ಗುಂಪೊಂದು ಘಟನೆಯನ್ನು ಖಂಡಿಸಿದೆ.
ನರೇಂದ್ರ ಮೋದಿ ಸರಕಾರವು ವಿದ್ಯಾರ್ಥಿಗಳು ಮತ್ತು ಮಾನವಹಕ್ಕುಗಳ ಕಾರ್ಯಕರ್ತರ ವಿರುದ್ಧ ದ್ವೇಷ ಸಾಧಿಸುತ್ತಿದೆ ಎಂದು ಹೇಳಿಕೆಯೊಂದರಲ್ಲಿ ಅವರು ಆರೋಪಿಸಿದ್ದಾರೆ.
ಮುಖ್ಯವಾಗಿ ಉಮರ್ ಖಾಲಿದ್, ಮೀರನ್ ಹೈದರ್ ಮತ್ತು ಸಫೂರಾ ಝಾರ್ಗರ್ ವಿರುದ್ಧ ದಾಖಲಿಸಲಾಗಿರುವ ಆರೋಪಗಳನ್ನು ಉಲ್ಲೇಖಿಸಿದ್ದಾರೆ. ಈ ಮೂವರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈಗ ಅವರ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.
ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್, ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯ, ಕೇಂಬ್ರಿಜ್ ವಿಶ್ವವಿದ್ಯಾನಿಲಯ ಮತ್ತು ಬ್ರಿಟನ್ನ ಇತರ ಖ್ಯಾತ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಈ ಹೇಳಿಕೆಗೆ ಸಹಿ ಹಾಕಿದ್ದಾರೆ.
ಭಾರತೀಯ ಪೌರತ್ವದ ಜಾತ್ಯತೀತ ಗುಣವನ್ನು ಬದಲಾಯಿಸುವ ನೂತನ ಕಾನೂನುಗಳ ವಿರುದ್ಧ ನಡೆದ ಬೃಹತ್ ಹಾಗೂ ಶಾಂತಿಯುತ ಪ್ರತಿಭಟನೆಗಳಲ್ಲಿ ಭಾಗವಹಿಸಿರುವುದಕ್ಕಾಗಿ ಈ ಮೂವರ ವಿರುದ್ಧ ಕಠಿಣ ಕಾನೂನುಗಳ ಅಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ತಿಹಾರ್ ಜೈಲಿನಲ್ಲಿ ಕೊರೋನ ಭೀತಿಯಲ್ಲಿ ಗರ್ಭಿಣಿ
ಸಫೂರಾ ಝರ್ಗರ್ ಗರ್ಭಿಣಿಯಾಗಿದ್ದು, ಕೋವಿಡ್-19 ಸಾಂಕ್ರಾಮಿಕಕ್ಕೆ ಅವರು ಗುರಿಯಾಗುವ ಸಾಧ್ಯತೆ ಅಧಿಕವಾಗಿದೆ. ಆದರೂ ಅವರನ್ನು ದಿಲ್ಲಿಯ ಜನಜಂಗುಳಿಯಿಂದ ಕೂಡಿದ ತಿಹಾರ್ ಜೈಲಿನಲ್ಲಿ ಇರಿಸಿರುವುದು ಆಘಾತಕಾರಿಯಾಗಿದೆ ಎಂದು ಬ್ರಿಟನ್ನ ವಿಶ್ವವಿದ್ಯಾನಿಲಯಗಳ ವಿದ್ವಾಂಸರು ಹೇಳಿದ್ದಾರೆ.







