ಶ್ರಮಿಕ್ ರೈಲಿಗೆ ಅವಕಾಶ ನೀಡದಿರುವುದು ಅನ್ಯಾಯ: ಮಮತಾಗೆ ಅಮಿತ್ ಶಾ ಪತ್ರ
ಪತ್ರ ಸುಳ್ಳಿನ ಕಂತೆ:ತೃಣಮೂಲ ಕಾಂಗ್ರೆಸ್

ಹೊಸದಿಲ್ಲಿ,ಮೇ 9: ಅಲ್ಲಲ್ಲಿ ಸಿಲುಕಿರುವ ವಲಸಿಗ ಕಾರ್ಮಿಕರು ತಮ್ಮೂರಿಗೆ ವಾಪಸ್ ಕಳುಹಿಸುವ ನಿಟ್ಟಿನಲ್ಲಿ ಬಂಗಾಳ ಸರಕಾರದಿಂದ ಕೇಂದ್ರ ಸರಕಾರ ನಿರೀಕ್ಷಿತ ಬೆಂಬಲ ಸ್ವೀಕರಿಸುತ್ತಿಲ್ಲ ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಬರೆದ ಪತ್ರವೊಂದರಲ್ಲಿ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಬಂಗಾಳ ಸರಕಾರ ರೈಲ್ವೆ ಇಲಾಖೆಯಿಂದ ಓಡಿಸುತ್ತಿರುವ ಶ್ರಮಿಕ್(ಕಾರ್ಮಿಕರ)ರೈಲು ರಾಜ್ಯಕ್ಕೆ ತಲುಪಲು ಅವಕಾಶ ನೀಡುತ್ತಿಲ್ಲ.ದೇಶಾದ್ಯಂತ ಸಿಲುಕಿರುವ ಬಂಗಾಳಿ ವಲಸಿಗರಿಗೆ ಇದೊಂದು ಅನ್ಯಾಯವಾಗಿದೆ. ಈ ತನಕ ಕೊರೋನ ವೈರಸ್ ಲಾಕ್‌ಡೌನ್‌ನಿಂದ ಸಿಲುಕಿರುವ 2 ಲಕ್ಷ ವಲಸಿಗ ಕಾರ್ಮಿಕರಿಗೆ ಸಹಾಯ ಮಾಡಲಾಗಿದೆ. ಬಂಗಾಳ ಸರಕಾರದ ಅಸಹಾಯಕ ಧೋರಣೆ ವಲಸಿಗ ಕಾರ್ಮಿಕರಿಗೆ ಕಷ್ಟವನ್ನು ತಂದೊಡ್ಡಲಿದೆ ಎಂದು ಶಾ ಎಚ್ಚರಿಕೆ ನೀಡಿದರು.
ಶಾ ಆರೋಪಕ್ಕೆ ಪ್ರತಿಕ್ರಿಯಿಸಿದ ತೃಣಮೂಲ ಕಾಂಗ್ರೆಸ್ ಸಂಸದ ಶಂತನು ಸೇನ್, ಇದೊಂದು ಅತ್ಯಂತ ದುರದೃಷ್ಟಕರ. ಕೇಂದ್ರ ಕಾರ್ಯದರ್ಶಿ ಬರೆದಿರುವ ಪತ್ರ ಸುಳ್ಳಿನ ಕಂತೆ. ಕೇಂದ್ರ ಸರಕಾರ ಕೋಮುವಾದದ ಕಾರ್ಡ್‌ನಿಂದ ಆಟವಾಡುತ್ತಿದೆ. ಕೇಂದ್ರ ಸರಕಾರ ರಾಜ್ಯಕ್ಕೆ ಸಮರ್ಪಕ ಸಂಪನ್ಮೂಲವನ್ನು ಪೂರೈಸಲು ವಿಫಲವಾಗಿದೆ ಎಂದು ಆರೋಪಿಸಿದರು.





