ಮನೆಯೊಳಗೆ ನುಗ್ಗಿ ಮಗುವನ್ನು ಹೊತ್ತೊಯ್ದು ಕೊಂದ ಚಿರತೆ

ಬೆಂಗಳೂರು, ಮೇ 9: ಮನೆಯೊಳಗೆ ನುಗ್ಗಿದ ಚಿರತೆ ಮಗುವೊಂದನ್ನು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಮಾಗಡಿ ತಾಲೂಕಿನ ಕದರಯ್ಯನ ಪಾಳ್ಯದಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಮೂರೂವರೆ ವರ್ಷದ ಹೇಮಂತ್ ಎಂಬ ಮಗು ಚಿರತೆ ದಾಳಿಗೆ ಬಲಿಯಾಗಿದೆ.
ಶುಕ್ರವಾರ ರಾತ್ರಿ ವಿದ್ಯುತ್ ವ್ಯತ್ಯಯಗೊಂಡಿದ್ದರಿಂದ ವಿಪರೀತ ಸೆಖೆಯಾಗುತ್ತಿದ್ದ ಕಾರಣ ಮನೆಯವರು ಮನೆಬಾಗಿಲು ತೆರೆದಿಟ್ಟೆ ಮಲಗಿದ್ದರೆನ್ನಲಾಗಿದೆ. ಈ ವೇಳೆ ಮನೆಯೊಳಗೆ ನುಗ್ಗಿರುವ ಚಿರತೆಯು ಮಗು ಹೇಮಂತ್‌ನನ್ನು ಹೊತ್ತೊಯ್ದಿದೆಯೆನ್ನಲಾಗಿದೆ. ಬಳಿಕ ಮನೆಮಂದಿ ಮಗುವಿಗಾಗಿ ಹುಡುಕಾಟ ನಡೆಸಿದಾಗ ಮನೆಯಿಂದ ಸುಮಾರು 60 ಮೀಟರ್ ದೂರದ ಪೊದೆಯೊಂದರಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.
ಮಗುವಿನ ತಂದೆ-ತಾಯಿ ಬಿಡದಿ ಬಳಿಯಲ್ಲಿ ನೆಲೆಸಿದ್ದು, ರಜೆ ಇದ್ದ ಕಾರಣ ವಾರದ ಹಿಂದೆಯಷ್ಟೇ ತಾಯಿ ಮನೆಗೆ ಬಂದಿದ್ದರೆನ್ನಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಶಾಸಕ ಎ.ಮಂಜುನಾಥ್ ಭೇಟಿ ನೀಡಿದ್ದಾರೆ.
Next Story





