ಗುಂಡ್ಯ: ವಲಸೆ ಕಾರ್ಮಿಕರನ್ನು ಅಕ್ರಮವಾಗಿ ಕರೆದೊಯ್ಯುತ್ತಿದ್ದ 2 ಲಾರಿಗಳಿಗೆ ತಡೆ
ಉತ್ತರ ಭಾರತದ 120 ಕಾರ್ಮಿಕರು ಮತ್ತೆ ಮಂಗಳೂರಿಗೆ ವಾಪಸ್

ನೆಲ್ಯಾಡಿ, ಮೇ 9: ಎರಡು ಲಾರಿಗಳಲ್ಲಿ ಮಂಗಳೂರು ಕಡೆಯಿಂದ ಬೆಂಗಳೂರು ಮಾರ್ಗವಾಗಿ ಉತ್ತರ ಭಾರತದತ್ತ ಹೊರಟಿದ್ದ 120 ವಲಸೆ ಕಾರ್ಮಿಕರನ್ನು ಗುಂಡ್ಯ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ತಡೆದು ಮತ್ತೆ ಮಂಗಳೂರಿಗೆ ಕಳುಹಿಸಿದ ಘಟನೆ ವರದಿಯಾಗಿದೆ.
ಉತ್ತರ ಭಾರತ ಮೂಲದ 120 ಕಾರ್ಮಿಕರನ್ನು ಹೇರಿಕೊಂಡು ಹರ್ಯಾಣ ನೋಂದಣಿಯ ಎರಡು ಲಾರಿಗಳು ಬೆಂಗಳೂರು ಮಾರ್ಗವಾಗಿ ಉತ್ತರ ಭಾರತದತ್ತ ಹೊರಟಿತ್ತು. ಎರಡೂ ಲಾರಿಗಳಿಗೆ ಮೇಲ್ಭಾಗದಲ್ಲಿ ಟರ್ಪಾಲ್ ಹೊದಿಸಲಾಗಿದ್ದು, ಅಗತ್ಯ ವಸ್ತುಗಳ ಸಾಗಾಟದ ಸ್ಟಿಕ್ಕರ್ ಸಹ ಅಂಟಿಸಲಾಗಿತ್ತೆನ್ನಲಾಗಿದೆ. ಮೇ 8ರಂದು ಮುಂಜಾನೆ 3 ಗಂಟೆ ಸುಮಾರಿಗೆ ಗುಂಡ್ಯ ಚೆಕ್‌ಪೋಸ್ಟ್ ತಲುಪಿದ ಈ ಲಾರಿಗಳನ್ನು ಪೊಲೀಸರು ತಪಾಸಣೆ ನಡೆಸಿದಾಗ ಅಕ್ರಮವಾಗಿ ಜನರನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾರಿಗಳನ್ನು ಪೊಲೀಸರು ತಡೆದು ಅದರಲ್ಲಿದ್ದ ಕಾರ್ಮಿಕರನ್ನು ಗುಂಡ್ಯ ಪಿಲಿಕಜೆ ಶಾಲೆಗೆ ಕರೆದೊಯ್ದರು. ಆದರೆ ಕಾರ್ಮಿಕರು ತಮ್ಮನ್ನು ಊರಿಗೆ ಕಳುಹಿಸಿಕೊಡುವಂತೆ ಪಟ್ಟುಹಿಡಿದು ಕುಳಿತಿದ್ದರು.
ಮಾಹಿತಿ ತಿಳಿದ ಪುತ್ತೂರು ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಆಗಮಿಸಿ ಕಾರ್ಮಿಕರ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಮಾತನಾಡಿದ ಕಾರ್ಮಿಕರು, ಮಂಗಳೂರಿಗೆ ಬಟ್ಟೆ ವ್ಯಾಪಾರಕ್ಕೆಂದು ನಾವು ಬಂದಿದ್ದೇವೆ. ಲಾಕ್‌ಡೌನ್‌ನಿಂದಾಗಿ ಕಳೆದ ಒಂದೂವರೇ ತಿಂಗಳಿನಿಂದ ಕೆಲಸವೂ ಇಲ್ಲದೇ ಹಣವೂ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದೇವೆ. ವಾಸ್ತವ್ಯಕ್ಕೆ ಸರಿಯಾದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ನಮ್ಮನ್ನು ಊರಿಗೆ ಕಳುಹಿಸಿಕೊಡಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಒಪ್ಪದ ಸಹಾಯಕ ಆಯುಕ್ತರು, ನೀವು ಹೊರ ರಾಜ್ಯಕ್ಕೆ ಪ್ರಯಾಣಿಸಲು ಇಲ್ಲಿನ ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆದುಕೊಳ್ಳಬೇಕು. ನಂತರ ನಿಮ್ಮ ಊರಿನ ಜಿಲ್ಲಾಧಿಕಾರಿಗಳಿಂದಲೂ ಅನುಮತಿ ಸಿಗಬೇಕು. ಕೊರೋನ ಹರಡದಂತೆ ಎಲ್ಲ ರಾಜ್ಯಗಳಲ್ಲೂ ಕಟ್ಟುನಿಟ್ಟಿನ ಕ್ರಮಗಳಿರುವುದರಿಂದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಅನುಮತಿ ಪತ್ರವಿಲ್ಲದೇ ಹೋಗುವಂತಿಲ್ಲ. ಆದ್ದರಿಂದ ಜಿಲ್ಲಾಡಳಿತದಿಂದ ಅನುಮತಿ ಪಡೆದು ಬಳಿಕ ನಿಮ್ಮೂರಿಗೆ ಕಳುಹಿಸಿಕೊಡಲಾಗುವುದು. ಅಲ್ಲಿಯ ತನಕ ಮಂಗಳೂರಿನಲ್ಲಿ ತಂಗಲು ಹಾಗೂ ಊಟಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕೊನೆಗೆ ಕಾರ್ಮಿಕರು ಇದಕ್ಕೆ ಒಪ್ಪಿದರು. ಬಳಿಕ ಅವರಿಗೆ ಮತ್ತೆ ಮಂಗಳೂರಿಗೆ ತೆರಳಲು ಮೂರು ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ಸುಬ್ರಹ್ಮಣ್ಯ ದೇವಸ್ಥಾನದಿಂದ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಈ ನಡುವೆ ಯಾವುದೇ ಅನುಮತಿ ಇಲ್ಲದೇ ಕಾರ್ಮಿಕರನ್ನು ತುಂಬಿಸಿಕೊಂಡು ಸಾಗಾಟ ಮಾಡಿದ ಲಾರಿಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆಯೂ ಸಹಾಯಕ ಆಯುಕ್ತರು ಪೊಲೀಸರಿಗೆ ಸೂಚಿಸಿದ್ದಾರೆ









