ಬೀದರ್: ಮತ್ತೆ ಮೂವರಲ್ಲಿ ಕೊರೋನ ಸೋಂಕು ದೃಢ; ಸೋಂಕಿತರ ಸಂಖ್ಯೆ 26ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ
ಬೀದರ್, ಮೇ 9: ಬೀದರ್ ನಗರದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಶನಿವಾರ ಮತ್ತೆ ಮೂವರಲ್ಲಿ ಕೊರೋನ ಸೋಂಕು ಕಾಣಿಸಿಕೊಂಡಿದೆ. ಇದರಿಂದಾಗಿ ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ.
ಶನಿವಾರ ನಗರದ 30 ವರ್ಷದ ಯುವಕ, ಯುವತಿ ಹಾಗೂ 12 ವರ್ಷದ ಬಾಲಕಿಗೆ ಸೋಂಕು ತಗಲಿದೆ. ಒಟ್ಟಾರೆ ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 26 ಆಗಿದ್ದು, ಅದರಲ್ಲಿ 14 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, ಇನ್ನು 11 ಪ್ರಕರಣಗಳು ಸಕ್ರಿಯವಾಗಿವೆ.
ಎಪ್ರಿಲ್ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದ ನಿವೃತ್ತ ಶಿಕ್ಷಕರಿಗೆ ಕೊರೋನ ಸೋಂಕು ದೃಢಪಟ್ಟ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೆ ಮೂವರಿಗೆ ಸೋಂಕು ತಗುಲಿರುವುದು ಜನರಲ್ಲಿ ಆಘಾತ ಮೂಡಿಸಿದೆ.
ಲಾಕ್ಡೌನ್ 3 ಈಗಾಗಲೇ ಘೋಷಣೆಯಾಗಿದ್ದು, ರಾಜ್ಯ ಸರಕಾರ ಕೆಲವೊಂದು ಸಡಿಲಿಕೆ ನೀಡಿದೆ. ಜನರು ರಸ್ತೆಗೆ ಬರುವುದು ಸರಿಯಲ್ಲ. ಎಂದಿನಂತೆ ಮನೆಯಲ್ಲಿಯೇ ಇರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಮನವಿ ಮಾಡಿದ್ದಾರೆ.
ಬೀದರ್ ನಲ್ಲಿ ಮತ್ತೆ ಹೊಸದಾಗಿ ಮೂರು ಕೊರೋನ ಸೋಂಕು ದೃಢಪಟ್ಟಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಅವಶ್ಯಕತೆ ಇದ್ದಲ್ಲಿ ಮಾತ್ರ ಮನೆಯಿಂದ ಹೊರ ಬರಬೇಕೆಂದು ಸಚಿವರು ತಿಳಿಸಿದ್ದಾರೆ.





