ಸುರಕ್ಷತಾ ಕ್ರಮ ಕೈಗೊಳ್ಳದ ಆರೋಪ: ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆ ಸಿಬ್ಬಂದಿಗಳ ಪ್ರತಿಭಟನೆ

ಬೆಂಗಳೂರು, ಮೇ 9: ನಾವು ಕೆಲಸ ಮಾಡುವುದಿಲ್ಲ ಎಂದು ನಗರದ ವಾಣಿ ವಿಲಾಸ್ ಆಸ್ಪತ್ರೆಯ ಮುಂದೆ ಅಲ್ಲಿನ ವೈದ್ಯರು, ಶುಶ್ರೂಷಕರು, ಇನ್ನಿತರ ವೈದ್ಯಕೀಯ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
ಕೊರೋನ ವೈರಸ್ ಸೋಂಕಿತ ಮಹಿಳೆ ಹಾಗೂ ಆಕೆಯ ಸಂಬಂಧಿಕರು ವಾಣಿ ವಿಲಾಸ ಆಸ್ಪತ್ರೆಯ ಎಲ್ಲಾ ಕಡೆ ಓಡಾಡಿದ ಮೇಲೆ ಭಯಭೀತರಾಗಿರುವ ಆಸ್ಪತ್ರೆಯ ಸಿಬ್ಬಂದಿ ನಾವು ಕೆಲಸ ಮಾಡುವುದಿಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆಗೆ ಮುಂದಾಗಿದ್ದಾರೆ.
ವಾಣಿ ವಿಲಾಸ್ ಆಸ್ಪತ್ರೆಯನ್ನು 'ನಾನ್‍ಕೋವಿಡ್' ಆಸ್ಪತ್ರೆ ಎಂದು ಪರಿಗಣಿಸಲಾಗಿದೆ. ಹೀಗಾಗಿ, ಅಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಮಾಸ್ಕ್ ಮತ್ತು ಪಿಪಿಇ ಕಿಟ್‍ಗಳನ್ನು ನೀಡಿಲ್ಲ. 'ನಾನ್‍ಕೋವಿಡ್' ಆಸ್ಪತ್ರೆ ಎಂದು ಪರಿಗಣಿಸಲಾಗಿದ್ದರೂ, ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಶಂಕಿತರನ್ನು ಪರೀಕ್ಷೆ ಮಾಡಲಾಗುತ್ತಿದೆ. ಸನ್ನಿವೇಶ ಹೀಗಿದ್ದರೂ, ಸೂಕ್ತ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನ ಹರಿಸಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಆತಂಕಕ್ಕೆ ಕಾರಣವಾಗಿದೆ.
ನಮ್ಮನ್ನು ಕೊರೋನ ವಾರಿಯರ್ಸ್ ವಿಮೆಗೂ ಸೇರಿಸಿಲ್ಲ. ಇದೀಗ ಕೊರೋನ ಸೋಂಕಿತರು ಇಲ್ಲಿ ಭೇಟಿ ಕೊಟ್ಟಿದ್ದಾರೆ. ಹೀಗಿದ್ದರೂ, ಸುರಕ್ಷತೆ ವಹಿಸದೆ ನಮ್ಮನ್ನು ಕೆಲಸ ಮಾಡಿ ಎಂದು ಹೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಹೇಗೆ ಕೆಲಸ ಮಾಡಲು ಸಾಧ್ಯ ಎಂದು ಓರ್ವ ವೈದ್ಯಕೀಯ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ.
ಮಹಿಳೆಗೆ ಕೊರೋನ ವೈರಸ್ ಸೋಂಕು ತಗುಲಿರುವುದರಿಂದ ಕೇವಲ 30 ಮಂದಿಯನ್ನು ಕ್ವಾರೆಂಟೈನ್ ಮಾಡಿ, ಉಳಿದವರು ಕೆಲಸ ಮಾಡಿ ಎಂದು ಹೇಳಿದ್ದಾರೆ. ಸೋಂಕಿತರು ಓಡಾಡಿದ್ದ ಎಲ್ಲ ಜಾಗದಲ್ಲೂ ನಾವೂ ಕೂಡ ಓಡಾಡಿದ್ದೇವೆ. ಖಾಸಗಿ ಆಸ್ಪತ್ರೆಯಲ್ಲಿ ಹೀಗಾಗಿದ್ದರೆ, ಕ್ಲೋಸ್ ಮಾಡ್ತಾರೆ. ನಮಗೂ ಸೋಂಕು ತಗುಲಿದರೆ ಏನು ಮಾಡುವುದು ಎಂದು ವೈದ್ಯಕೀಯ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ.
ಸ್ಥಳಕ್ಕೆ ಆರೋಗ್ಯ ಸಚಿವ ಶ್ರೀರಾಮುಲು ಭೇಟಿ
ಗರ್ಭಿಣಿಯೊಬ್ಬರಿಗೆ ಕೊರೋನ ಸೋಂಕು ಪಾಸಿಟಿವ್ ಬಂದ ಕಾರಣ ವಾಣಿ ವಿಲಾಸ ಆಸ್ಪತ್ರೆಯ ಸಿಬ್ಬಂದಿಯಲ್ಲಿ ತೀವ್ರ ಆತಂಕ ಮನೆ ಮಾಡಿದ್ದು, ಯಾರೂ ಗಾಬರಿ ಪಡಬೇಡಿ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದಾಗಿ ಆರೋಗ್ಯ ಸಚಿವ ಶ್ರೀರಾಮುಲು ಅಭಯ ನೀಡಿದ್ದಾರೆ.
ಕೊರೋನ ಪಾಸಿಟಿವ್ ಬಂದ ಗರ್ಭಿಣಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ. ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ. ನಾನ್‍ಕೋವಿಡ್ ಆಸ್ಪತ್ರೆಗಳಿಗೂ ಪಿಪಿಇ ಕಿಟ್‍ಗಳನ್ನು ಒದಗಿಸುತ್ತೇವೆ. ಈ ಬಗ್ಗೆ ಟಾಸ್ಕ್ ಫೋರ್ಸ್ ಸಭೆಯಲ್ಲಿಯೂ ಚರ್ಚೆ ಮಾಡಿದ್ದೇವೆ. ವೈದ್ಯರು, ನರ್ಸ್‍ಗಳು, ವೈದ್ಯ ವಿದ್ಯಾರ್ಥಿಗಳು ಯಾರೂ ಗಾಬರಿ ಪಡಬೇಕಿಲ್ಲ. ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.






.jpg)
.jpg)

