ಎಚ್-1ಬಿ ವೀಸಾ, ವಿದ್ಯಾರ್ಥಿ ವೀಸಾಗಳ ನಿಷೇಧ ಪ್ರಕ್ರಿಯೆಗೆ ಅಮೆರಿಕ ಚಾಲನೆ: ವಾಲ್ ಸ್ಟ್ರೀಟ್ ಜರ್ನಲ್ ವರದಿ

ವಾಶಿಂಗ್ಟನ್, ಮೇ 9: ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳು ಹೆಚ್ಚಾಗಿ ಬಳಸುವ ಎಚ್-1ಬಿ ವೀಸಾ ಮತ್ತು ಉದ್ಯೋಗ ಖಾತರಿಯೊಂದಿಗೆ ಬರುವ ವಿದ್ಯಾರ್ಥಿ ವೀಸಾ ಮುಂತಾದ ಕೆಲವು ಉದ್ಯೋಗ-ಆಧಾರಿತ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸುವ ನಿಟ್ಟಿನಲ್ಲಿ ಅಮೆರಿಕ ಆಡಳಿತ ಕೆಲಸ ಮಾಡುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ತಿಳಿಸಿದೆ.
ಅಮೆರಿಕದಲ್ಲಿ ಕೊರೋನ ವೈರಸ್ ಹಿನ್ನೆಲೆಯಲ್ಲಿ ಉಂಟಾಗಿರುವ ಅತ್ಯಧಿಕ ಪ್ರಮಾಣದ ನಿರುದ್ಯೋಗದ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಸರಕಾರ ಈ ಕ್ರಮಕ್ಕೆ ಮುಂದಾಗಿದೆ.
ಅಮೆರಿಕದಲ್ಲಿ ಎಚ್-1ಬಿ ವೀಸಾದಡಿಯಲ್ಲಿ ಸುಮಾರು 5 ಲಕ್ಷ ವಲಸಿಗರು ಕೆಲಸ ಮಾಡುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಧ್ಯಕ್ಷರ ವಲಸೆ ವಿಷಯಕ್ಕೆ ಸಂಬಂಧಿಸಿದ ಸಲಹೆಗಾರರು ಈ ವಿಷಯದಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಇದಕ್ಕೆ ಸಂಬಂಧಿಸಿದ ಅಧ್ಯಕ್ಷೀಯ ಆದೇಶವು ಈ ತಿಂಗಳಲ್ಲಿ ಹೊರಬೀಳಬಹುದಾಗಿದೆ. ಈ ಆದೇಶವು ಹೊಸದಾಗಿ ಕೆಲವು ತಾತ್ಕಾಲಿಕ ಉದ್ಯೋಗ ಆಧಾರಿತ ವೀಸಾಗಳನ್ನು ನೀಡುವುದನ್ನು ನಿಷೇಧಿಸಬಹುದಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಶುಕ್ರವಾರ ವರದಿ ಮಾಡಿದೆ.
ಅತ್ಯಂತ ಕುಶಲ ಕೆಲಸಗಾರರಿಗೆ ನೀಡಲಾಗುವ ಎಚ್-1ಬಿ ವೀಸಾ, ಸಾಂದರ್ಭಿಕ ವಲಸೆ ಕೆಲಸಗಾರರಿಗೆ ನೀಡಲಾಗುವ ಎಚ್-2ಬಿ ವೀಸಾ ಹಾಗೂ ಉದ್ಯೋಗ ಖಾತರಿಯೊಂದಿಗೆ ಬರುವ ವಿದ್ಯಾರ್ಥಿ ವೀಸಾಗಳು ಮುಂತಾದ ಕೆಲವು ವೀಸಾ ವರ್ಗಗಳಿಗೆ ಈ ಆದೇಶ ಅನ್ವಯಿಸುತ್ತದೆ ಎಂದು ಪತ್ರಿಕೆ ಹೇಳಿದೆ.
2 ತಿಂಗಳಲ್ಲಿ 3.3 ಕೋಟಿ ಉದ್ಯೋಗ ನಷ್ಟ
ಕೊರೋನ ವೈರಸ್ ಸಾಂಕ್ರಾಮಿಕದ ಪರಿಣಾಮವಾಗಿ ಅಮೆರಿಕದಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 3.3 ಕೋಟಿಗೂ ಅಧಿಕ ಮಂದಿ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ. ಇದರಿಂದಾಗಿ ಅಮೆರಿಕದ ಆರ್ಥಿಕತೆ ಸ್ಥಗಿತಗೊಂಡಿದೆ.







