ಮೈಸೂರು: ಮನೆಯಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಖದೀಮರು

ಸಾಂದರ್ಭಿಕ ಚಿತ್ರ
ಮೈಸೂರು,ಮೇ.9: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ತಮ್ಮ ಕೈಚಳಕ ತೋರಿದ್ದು, ಸುಮಾರು 150 ಗ್ರಾಂ ಚಿನ್ನದ ಒಡವೆಗಳು ಹಾಗೂ 700 ಗ್ರಾಂ ಬೆಳ್ಳಿ ಪದಾರ್ಥಗಳನ್ನು ದೋಚಿ ಪರಾರಿಯಾಗಿರುವ ಘಟನೆ ರಾಜೀವ್ ನಗರದ ಮೂರನೇ ಹಂತದಲ್ಲಿ ನಡೆದಿದೆ.
ಅರಸ್ ಕಾರ್ ಕಂಪನಿಯಲ್ಲಿ ಕಸ್ಟಮರ್ ಕೇರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿರುವ ಬಿ.ಎಸ್.ಜೀವನ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮನೆಯಲ್ಲಿದ್ದ 4,50,000 ರೂ. ಮೌಲ್ಯದ ಚಿನ್ನಾಭರಣಗಳು, 50,000 ರೂ. ಮೌಲ್ಯದ ಬೆಳ್ಳಿ ಪದಾರ್ಥಗಳು ಕಳ್ಳತನವಾಗಿದೆ.
ಮನೆಯಲ್ಲಿದ್ದ 5 ಚಿನ್ನದ ಓಲೆ, ಎರಡು ಚಿನ್ನದ ಚೈನ್, 6 ಚಿನ್ನದ ಉಂಗುರಗಳು, ಒಂದು ಕರಿಮಣಿ ಸರ, ಒಂದು ಚಿನ್ನದ ಕಡಗದ ಬಳೆ, ಎರಡು ಚಿನ್ನದ ಕೊಕ್ಕೆ ತಾಯಿ ಚೈನ್, ಒಂದು ಜೊತೆ ಚಿನ್ನದ ಬಳೆ, ಎರಡು ಚಿನ್ನದ ನಾಣ್ಯಗಳು, ಬೆಳ್ಳಿ ಪೀಚೆ ಕತ್ತಿ ಎರಡು ಹಾಗೂ ಎಂಐ ಕಂಪನಿಯ ವೈ-1 ಲೈಟ್ ಮೊಬೈಲ್ ಫೋನ್ ಕಳ್ಳತನವಾಗಿದೆ.
ಜೀವನ್ ಅವರ ತಾಯಿಗೆ ಹುಷಾರಿಲ್ಲದ ಕಾರಣ ಎ.9 ರಂದು ಕುಟುಂಬ ಸಮೇತ ಕೊಡಗಿನ ಕಕ್ಕಬ್ಬೆ ಗ್ರಾಮಕ್ಕೆ ತೆರಳಿದ್ದರು. ಮೈಸೂರು ಜಿಲ್ಲೆಯಲ್ಲಿ ಕೊರೋನ ವೈರಸ್ (ಕೋವಿಡ್ 19) ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದರಿಂದ ವಾಪಸ್ ಮೈಸೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಮೇ 4 ರಂದು ಪೊಲೀಸರಿಂದ ಪಾಸ್ ಪಡೆದು ಮೈಸೂರಿಗೆ ಬಂದಿದ್ದರು. ಮನೆಯ ಹತ್ತಿರ ಬಂದಾಗ ಮನೆಯಲ್ಲಿ ಕರೆಂಟ್ ಇಲ್ಲದಿರುವುದನ್ನು ಗಮನಿಸಿದ ಅವರು ಮನೆ ಒಳಗೂ ಹೋಗದೆ ಆಲನಹಳ್ಳಿ ಬಡಾವಣೆಯಲ್ಲಿರುವ ಅತ್ತೆ ಮನೆಗೆ ತೆರಳಿದರು. ಈ ವೇಳೆ ಮನೆಯ ಗೇಟ್ ಹಾಕಲಾಗಿತ್ತು. ಮರುದಿನ ಬೆಳಗ್ಗೆ ಮನೆಗೆ ವಾಪಸ್ ಬಂದಾಗ ಗೇಟ್ ಗೆ ಹಾಕಲಾಗಿದ್ದ ಬೀಗ, ಮುಂಬಾಗಲಿನ ಬೀಗ ಮುರಿದಿತ್ತು. ಮನೆಯ ಒಳಗೆ ಹೋಗಿ ನೋಡಿದಾಗ ಮೂರು ಬೆಡ್ ರೂಂಗಳಲ್ಲಿದ್ದ ವಾರ್ಡ್ ರೋಬ್ ಹಾಗೂ ಜೀವನ್ ಅವರ ತಂದೆಯ ರೂಂ ನಲ್ಲಿದ್ದ ಎರಡು ಬೀರುಗಳ ಬೀಗ ಮುರಿದಿತ್ತು. ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಸ್ಥಳಕ್ಕಾಗಮಿಸಿದ ಮೈಸೂರು ಗ್ರಾಮಾಂತರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







