ಕಾಶಿ ಯಾತ್ರೆಗೆ ತೆರಳಿ ಸಂಕಷ್ಟದಲ್ಲಿದ್ದ ಕನ್ನಡಿಗರ ನೆರವಿಗೆ ಧಾವಿಸಿದ ಬಿಎಸ್‌ವೈ ಪುತ್ರ ವಿಜಯೇಂದ್ರ

ಬೆಂಗಳೂರು, ಮೆ.9: ಕಾಶಿ ಯಾತ್ರೆಗೆ ತೆರಳಿ ಕೊರೋನ ಲಾಕ್ ಡೌನ್ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ ನಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಕನ್ನಡಿಗರ ನೆರವಿಗೆ ಧಾವಿಸಿದ ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರು, ಸಂಕಷ್ಟದಲ್ಲಿದ್ದವರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ತರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಮಾರ್ಚ್ 16 ರಂದು ಬೆಂಗಳೂರಿನಿಂದ ನಲವತ್ತೈದು ಮಂದಿ ಉತ್ತರ ಭಾರತದ ವಿವಿಧ ಸ್ಥಳಗಳಿಗೆ ಪ್ರವಾಸ ಕೈಗೊಂಡಿದ್ದರು. ಮಾರ್ಚ್ 22 ರವರೆಗೆ ಕಾಶಿ, ಗಯಾ, ಬುದ್ದಗಯಾ, ಪ್ರಯಾಗ್ ಸೇರಿ ಉತ್ತರ ಪ್ರದೇಶದ ಜಾಗಗಳನ್ನು ವೀಕ್ಷಿಸಿ ಮರಳಿ ರಾಜ್ಯಕ್ಕೆ ಹಿಂದಿರುಗಲು ಸನ್ನದ್ದರಾಗಿದ್ದರು. ಅಲ್ಲದೇ, ಹಿಂದಿರುಗಲು ಮಾ.22ಕ್ಕೆ ರೈಲ್ವೆಯ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ಆದರೆ, ಕೊರೋನ ಸೋಂಕಿನ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ರೈಲು ರದ್ದಾಯಿತು. ಬಳಿಕ ವಿಮಾನದಲ್ಲಿ ಹಿಂದಿರುಗಲು ಪ್ರಯತ್ನಿಸಿದರೂ ಸಾಧ್ಯವಾಗದೆ ದಿಢೀರ್ ಲಾಕ್ ಡೌನ್ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ ನಲ್ಲಿ ಸಿಲುಕಿದ್ದರು.
ಈ ಬಗ್ಗೆ ಸಂಕಷ್ಟದಲ್ಲಿ ಸಿಲುಕಿದವರು ತಮ್ಮನ್ನು ರಕ್ಷಿಸಲು ಹಲವರಲ್ಲಿ ಮನವಿ ಮಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ವಿಜಯೇಂದ್ರ ಅವರು, ಪ್ರಯಾಗ್ ನಲ್ಲಿ ಸಿಲುಕಿದ್ದ ಕನ್ನಡಿಗರು ಕರ್ನಾಟಕಕ್ಕೆ ಹಿಂದಿರುಗಲು ನೆರವಾಗಿದ್ದಾರೆ.
ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಜಯೇಂದ್ರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಜತೆ ಸಮಾಲೋಚನೆ ನಡೆಸಿ ರಾಜ್ಯದ ಪ್ರವಾಸಿಗರು ವಾಪಸ್ ಬರಲು ಸಹಕರಿಸಿದ್ದಾರೆ. ಅದರಂತೆ ನಿನ್ನೆ ರಾತ್ರಿ ಅವರೆಲ್ಲರೂ ರಾಜ್ಯಕ್ಕೆ ಬಸ್ ಮೂಲಕ ಆಗಮಿಸಿದ್ದು, ಸಿಎಂ ಬಿಎಸ್‌ವೈ, ವಿಜಯೇಂದ್ರ ಸಹಿತ ನೆರವಾದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.







