ಅಮೆರಿಕ: ವಿದೇಶಿ ವೈದ್ಯರು, ನರ್ಸ್‌ಗಳಿಗೆ ಗ್ರೀನ್ ಕಾರ್ಡ್ ನೀಡುವ ಮಸೂದೆ ಕಾಂಗ್ರೆಸ್‌ನಲ್ಲಿ ಮಂಡನೆ
ವಾಶಿಂಗ್ಟನ್, ಮೇ 9: ಅಮೆರಿಕದಲ್ಲಿ ಕೊರೋನ ವೈರಸ್‌ನಿಂದಾಗಿ ಭಾರೀ ಒತ್ತಡಕ್ಕೆ ಸಿಲುಕಿರುವ ಆರೋಗ್ಯ ಕ್ಷೇತ್ರದ ತುರ್ತು ಅಗತ್ಯಗಳನ್ನು ಪೂರೈಸುವುದಕ್ಕಾಗಿ ಸಾವಿರಾರು ವಿದೇಶಿ ನರ್ಸ್‌ಗಳು ಮತ್ತು ವೈದ್ಯರಿಗೆ ಬಳಕೆಯಾಗದಿರುವ ಗ್ರೀನ್ ಕಾರ್ಡ್‌ಗಳನ್ನು ವಿತರಿಸುವ ಉದ್ದೇಶದ ಮಸೂದೆಯೊಂದನ್ನು ಅಮೆರಿಕದ ಹಲವು ಸಂಸದರು ಸಂಸತ್ತು ಕಾಂಗ್ರೆಸ್‌ನಲ್ಲಿ ಮಂಡಿಸಿದ್ದಾರೆ.
ಅಮೆರಿಕದ ಗ್ರೀನ್ ಕಾರ್ಡ್‌ಗಳು ದೇಶದಲ್ಲಿ ಶಾಶ್ವತವಾಗಿ ವಾಸಿಸಲು ಅವಕಾಶ ನೀಡುತ್ತವೆ.
ಹಿಂದಿನ ವರ್ಷಗಳಲ್ಲಿ ಕಾಂಗ್ರೆಸ್ ಅನುಮೋದಿಸಿದ, ಆದರೆ ಬಳಕೆಯಾಗದೆ ಉಳಿದ ಗ್ರೀನ್ ಕಾರ್ಡ್‌ಗಳನ್ನು ಹಿಂದಕ್ಕೆ ಪಡೆದುಕೊಂಡು, ಸಾವಿರಾರು ವಲಸಿಗ ಆರೋಗ್ಯ ಸಿಬ್ಬಂದಿ ಅಮೆರಿಕದಲ್ಲಿಯೇ ಶಾಶ್ವತವಾಗಿ ಸೇವೆ ಸಲ್ಲಿಸಲು ಸಾಧ್ಯವಾಗುವಂತೆ ಅವರಿಗೆ ವಿತರಿಸಲು ಹೆಲ್ತ್‌ಕೇರ್ ವರ್ಕ್‌ಫೋರ್ಸ್ ರೆಸಿಲಿಯನ್ಸ್ ಆ್ಯಕ್ಟ್ ಅನುಮೋದನೆ ನೀಡುತ್ತದೆ.
ಕೋವಿಡ್-19 ಸಾಂಕ್ರಾಮಿಕದ ಅವಧಿಯಲ್ಲಿ 25,000 ನರ್ಸ್‌ಗಳು ಮತ್ತು 15,000 ವೈದ್ಯರಿಗೆ ಗ್ರೀನ್ ಕಾರ್ಡ್‌ಗಳನ್ನು ನೀಡಲು ಮಸೂದೆಯು ಅವಕಾಶ ನೀಡುತ್ರದೆ. ಅಯೋವ ಮುಂತಾದ ಸ್ಥಳಗಳಲ್ಲಿ ಕೊರೋನ ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಆರೋಗ್ಯ ಸಿಬ್ಬಂದಿಯನ್ನು ಈ ಮೂಲಕ ಅಲ್ಲಿಗೆ ಕಳುಹಿಸಬಹುದಾಗಿದೆ ಎಂದು ಮಸೂದೆ ಹೇಳುತ್ತದೆ.
ಮುಂದಿನ ವರ್ಷಗಳಲ್ಲಿ ಈ ಮಸೂದೆಯು ಎಚ್-1ಬಿ ಅಥವಾ ಜೆ2 ವೀಸಾಗಳಲ್ಲಿ ಅಮೆರಿಕದಲ್ಲಿರುವ ಭಾರೀ ಪ್ರಮಾಣದ ಭಾರತೀಯ ನರ್ಸ್‌ಗಳು ಮತ್ತು ವೈದ್ಯರಿಗೆ ನೆರವು ನೀಡುತ್ತದೆ.







