ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಗೋದಾಮಿಗೆ ಅಧಿಕಾರಿಗಳ ದಾಳಿ

ಮೂಡುಬಿದಿರೆ: ಅಲಂಗಾರಿನಲ್ಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಗೋದಾಮಿಗೆ ಶನಿವಾರ ತೂಕ ಮತ್ತು ಅಳತೆ ಮಾಪನ ಅಧಿಕಾರಿಗಳು ದಾಳಿ ನಡೆಸಿ ತೂಕದಲ್ಲಿ ವಂಚನೆ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸರಕಾರದಿಂದ ಬರುವ ಪಡಿತರ ಸಾಮಾಗ್ರಿಗಳನ್ನು ಇಲ್ಲಿನ ಗೋದಾಮಿನಲ್ಲಿ ದಾಸ್ತಾನಿರಿಸಿಕೊಂಡು ಇಲ್ಲಿಂದ ಮೂಡುಬಿದಿರೆಯ ವಿವಿಧ ನ್ಯಾಯ ಬೆಲೆ ಅಂಗಡಿಗಳಿಗೆ ಸರಬರಾಜು ಮಾಡಲಾಗುತ್ತಿದೆ. ಆದರೆ ಈ ರೀತಿ ಸರಬರಾಜು ಮಾಡಲಾದ ಅಕ್ಕಿ ಹಾಗೂ ಇನ್ನಿತರ ಪಡಿತರ ಸಾಮಾಗ್ರಿಗಳ ತೂಕದಲ್ಲಿ ವ್ಯತ್ಯಾಸ ಬರುತ್ತಿದ್ದ ಬಗ್ಗೆ ನ್ಯಾಯ ಬೆಲೆ ಅಂಗಡಿಯ ವರ್ತಕರೊಬ್ಬರು ಅಳತೆ ಮಾಪನ ಅಧಿಕಾರಿಗಳಿಗೆ ದೂರು ನೀಡಿದ್ದರು. ಉಡುಪಿ ಜಿಲ್ಲಾ ತೂಕ ಮತ್ತು ಅಳತೆ ಮಾಪನ ಸಹಾಯಕ ನಿಯಂತ್ರಕ ಗಜೇಂದ್ರ ಎಡಕೆ, ಇಲಾಖೆಯ ನಿರೀಕ್ಷಕ ಮೂಡುಬಿದಿರೆ ತಾಲ್ಲೂಕು ನಿರೀಕ್ಷಕ ಮಂಜಪ್ಪ ಮತ್ತು ಸಿಬಂದಿ ಹಂಸರಾಜ್ ಗೋದಾಮಿಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ ತೂಕದಲ್ಲಿ ಲೋಪ ಇರುವುದು ಸಾಬೀತಾದ ಹಿನ್ನೆಲೆಯಲ್ಲಿ ಅಳತೆ ಮಾಪನವನ್ನು ವಶಪಡಿಸಿಕೊಂಡು ಅಲ್ಲಿನ ಮೆನೇಜರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.





