ಡಬ್ಲ್ಯುಎಚ್‌ಒ ಚೀನಾದ ಕೈಗೊಂಬೆ; ಅದರ ಬಗ್ಗೆ ಶೀಘ್ರ ನಿರ್ಧಾರ: ಟ್ರಂಪ್

ವಾಶಿಂಗ್ಟನ್, ಮೇ 9: ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಕೈಗೊಂಬೆಯಾಗಿದೆ ಎಂದು ಆರೋಪಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಸಂಸ್ಥೆಯ ಬಗ್ಗೆ ನಾನು ಶೀಘ್ರದಲ್ಲೇ ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯು ಕೊರೋನ ವೈರಸ್ ವಿಷಯದಲ್ಲಿ ಜಗತ್ತಿಗೆ ತಪ್ಪು ಮಾಹಿತಿ ನೀಡುತ್ತಿದೆ ಹಾಗೂ ಅದು ಚೀನಾದ ಪರವಾಗಿ ನಿಂತಿದೆ ಎಂಬುದಾಗಿ ಆರೋಪಿಸಿರುವ ಟ್ರಂಪ್, ಅದಕ್ಕೆ ಅಮೆರಿಕ ನೀಡಬೇಕಾಗಿರುವ ದೇಣಿಗೆಯನ್ನು ಈಗಾಗಲೇ ನಿಲ್ಲಿಸಿದ್ದಾರೆ.
ಇದನ್ನು ವಿಶ್ವ ಆರೋಗ್ಯ ಸಂಸ್ಥೆಯು ಉದ್ದೇಶಪೂರ್ವಕವಾಗಿ ಮಾಡುತ್ತಿದೆ ಎಂದು ನಾನು ಹೇಳುತ್ತಿಲ್ಲ. ಬಹುಶಃ ಅಸಮರ್ಥತೆಯ ಪರಿಣಾಮವಾಗಿ ಹಾಗೆ ಆಗಿರಬಹುದು. ಅದು ಬಹುಷಃ ಅವರ ನಿಯಂತ್ರಣವನ್ನು ಮೀರಿ ಹೋಗಿದೆ. ಹಾಗಾಗಿ, ಅದರ ಬಗ್ಗೆ ಹೇಗೆ ಮಾತನಾಡಬೇಕು ಎನ್ನುವುದು ಅವರಿಗೆ ಗೊತ್ತಾಗುತ್ತಿಲ್ಲ ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದ್ದಾರೆ.
ಈ ವಿಶ್ವ ಆರೋಗ್ಯ ಸಂಸ್ಥೆಗೆ ನಾವು ವರ್ಷಕ್ಕೆ 500 ಮಿಲಿಯ ಡಾಲರ್ (ಸುಮಾರು 3,775 ಕೋಟಿ ರೂಪಾಯಿ) ಕೊಡುತ್ತಿದ್ದೇವೆ. ಆದರೆ, ಅವರು ಚೀನಾದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಚೀನಾ ಏನೇ ಮಾಡಿದರೂ ಅವರಿಗೆ ಅದು ಸರಿ. ನಾನು ಈ ಬಗ್ಗೆ ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತೇನೆ ಎಂದು ಟ್ರಂಪ್ ನುಡಿದರು.





