ಸಿಬಿಎಸ್ಇ ಮೌಲ್ಯಮಾಪನ ಇಂದಿನಿಂದ ಆರಂಭ
ಹೊಸದಿಲ್ಲಿ, ಮೇ 5: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್ಇ)ಯು ಈವರೆಗೆ ನಡೆಸಿರುವ 10ನೇ ಹಾಗೂ 12ನೇ ತರಗತಿ ಪರೀಕ್ಷೆಗಳ ಮೌಲ್ಯಮಾಪನವನ್ನು ಶಿಕ್ಷಕರು ರವಿವಾರದಿಂದ ತಮ್ಮ ಮನೆಗಳಲ್ಲೇ ನಡೆಸಲಿದ್ದಾರೆಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಶನಿವಾರ ತಿಳಿಸಿದ್ದಾರೆ. ಶಿಕ್ಷಕರಿಗೆ ಉತ್ತರ ಪತ್ರಿಕೆಗಳನ್ನು ವಿತರಿಸುವುದಕ್ಕಾಗಿ 3 ಸಾವಿರ ಶಾಲೆಗಳನ್ನು ಸಜ್ಜುಗೊಳಿಸಲಾಗುವುದೆಂದು ಅವರು ತಿಳಿಸಿದ್ದಾರೆ.
ಈತನಕ ನಡೆದಿರುವ 10ನೇ ಹಾಗೂ 12ನೇ ತರಗತಿಯ ಪರೀಕ್ಷೆಗಳ ಸುಮಾರು 1 ಕೋಟಿ ಉತ್ತರ ಪತ್ರಿಕೆಗಳನ್ನು ಶಿಕ್ಷಕರಿಗೆ ವಿತರಿಸಲಾಗುವುದು, ರವಿವಾರದಿಂದ ಮೌಲ್ಯ ಮಾಪನ ಆರಂಭಗೊಳ್ಳಲಿದೆಯೆಂದು ಪೋಖ್ರಿಯಾಲ್ ಆನ್ಲೈನ್ ಮೂಲಕ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊರೋನಾ ಹಾವಳಿಯ ಕಂಟೈನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರದೇಶಗಳ ಶಿಕ್ಷಕರ ಮನೆಗಳಿಗೆ ಉತ್ತರಪತ್ರಿಕೆಗಳನ್ನು ತಲುಪಿಸುವುದಕ್ಕೆ ಕೇಂದ್ರ ಸರಕಾರ ಅನುಮತಿ ನೀಡಿರುವುದಾಗಿ ಅವರು ಹೇಳಿದರು.
10ನೇ ತರಗತಿ ಹಾಗೂ 12ನೇ ತರಗತಿಗಳಿಗೆ ಬಾಕಿಯುಳಿದಿರುವ ಪರೀಕ್ಷೆಗಳು ಜುಲೈ 1ರಿಂದ ಜುಲೈ 15ರವರೆಗೆ ನಡೆಯಲಿದೆಯೆಂದು ಸಿಬಿಎಸ್ಇ ಪ್ರಕಟಿಸಿತ್ತು. ಕಳೆದ ಫೆಬ್ರವರಿಯಲ್ಲಿ ಕೋಮುಹಿಂಸಾಚಾರದಿಂದ ಪೀಡಿತವಾದ ಈಶಾನ್ಯ ದಿಲ್ಲಿಯ ಆರು ವಿಷಯಗಳಿಗೆ ಮಾತ್ರವೇ ಪರೀಕ್ಷೆಗಳನ್ನು ನಡೆಸಲಾಗುವುದೆಂದು ಸಿಬಿಎಸ್ಇ ತಿಳಿಸಿದೆ. ಇತರ ಪ್ರದೇಶಗಳಲ್ಲಿ ಹತ್ತನೆ ತರಗತಿ ವಿದ್ಯಾರ್ಥಿಗಳ ನಿರ್ವಹಣೆಯನ್ನು ಅವರು ಈಗಾಗಲೇ ಹಾಜರಾಗಿರುವ ಪರೀಕ್ಷೆಗಳ ಆಧಾರದಲ್ಲಿ ನಿರ್ಧರಿಸಲಾಗುವುದೆಂದು ಅದು ಹೇಳಿದೆ.