ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನು ಕರೆತರಲು ಡಿ.ಕೆ.ಶಿವಕುಮಾರ್ ಮನವಿ

ಬೆಂಗಳೂರು, ಮೇ 9: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸರಕಾರ ಕೊರೋನ ವಿಚಾರದಲ್ಲಿ ನಮ್ಮ ಮನವಿ, ಸಲಹೆಗಳಿಗೆ ಸ್ಪಂದಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನಮ್ಮೊಂದು ಮನವಿ, ಲಾಕ್‍ಡೌನ್‍ನಿಂದಾಗಿ ನಮ್ಮ ಕನ್ನಡಿಗರು, ನಮ್ಮ ಅಣ್ಣ-ತಮ್ಮ, ಅಕ್ಕ-ತಂಗಿಯರು ಹೊರ ರಾಜ್ಯಗಳಲ್ಲಿ ಗಡಿಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.
ಕನ್ನಡಿಗರು ತಮ್ಮ ತಾಯ್ನಾಡಿಗೆ ಮರಳಲು ಪ್ರಯತ್ನಿಸುತ್ತಿದ್ದು, ಇದಕ್ಕಾಗಿ ಲಕ್ಷಾಂತರ ಜನರು ಅರ್ಜಿ ಹಾಕಿಕೊಂಡಿದ್ದಾರೆ. ಅವರನ್ನೆಲ್ಲಾ ರಾಜ್ಯಕ್ಕೆ ಕರೆತರಲು ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ನಾನು ತಮ್ಮಲ್ಲಿ ಮನವಿ ಮಾಡುವೆ, ಅವರನ್ನೆಲ್ಲ ರಾಜ್ಯಕ್ಕೆ ಕರೆತರಲು ಅಗತ್ಯ ವ್ಯವಸ್ಥೆ ಮಾಡಿ ಎಂದು ಅವರು ಕೋರಿದ್ದಾರೆ.
ವಿದೇಶಗಳಲ್ಲಿ ಇರುವವರನ್ನು ಕರೆಯಿಸಿಕೊಳ್ಳಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲೆ ಇರುವವರನ್ನು ಕರೆತರಲು ಅವಕಾಶ ಸಿಗುತ್ತಿಲ್ಲ. ಅವರೆಲ್ಲ ರಾಜ್ಯಕ್ಕೆ ಬರಲು ವ್ಯವಸ್ಥೆ ಕಲ್ಪಿಸಿ. ನಾವು ನಿಮ್ಮ ಜೊತೆಗಿದ್ದೇವೆ. ಎಲ್ಲ ರೀತತಿಯ ಸಹಕಾರ ಕೊಡುತ್ತೇವೆ. ದಯವಿಟ್ಟು ಕನ್ನಡಿಗರನ್ನು ತಾಯ್ನಾಡಿಗೆ ಕರೆ ತನ್ನಿ ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.





