ವಿಶಾಖಪಟ್ಟಣಂ ರಾಸಾಯನಿಕ ಸ್ಥಾವರ ಮುಚ್ಚುಗಡೆ ಆಗ್ರಹಿಸಿ ಗ್ರಾಮಸ್ಥರ ಧರಣಿ

ವಿಶಾಖಪಟ್ಟಣ,ಮೇ 5: ವಿಷಾನಿಲ ಸೋರಿಕೆಯಿಂದ 11 ಮಂದಿ ಮೃತಟ್ಟು, ಸಾವಿರಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡ ವಿಶಾಖಪಟ್ಟಣಂನ ಎಲ್.ಜಿ.ಪಾಲಿಮರ್ಸ್ ಇಂಡಿಯಾ ಘಟಕವನ್ನು ತಕ್ಷಣವೇ ಮುಚ್ಚುಗಡೆ ಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ಆರ್.ಆರ್.ವೆಂಕಟಪುರಂ ಹಾಗೂ ಆಸುಪಾಸಿನ ಗ್ರಾಮಗಳ ನಿವಾಸಿಗಳು ಧರಣಿ ನಡೆಸಿದ್ದಾರೆ.
ಕಾರ್ಖಾನೆಯ ಆವರಣದೊಳಗೆ ನುಗ್ಗಿದ ಪ್ರತಿಭಟನಕಾರರು, ಕಾರ್ಖಾನೆಯನ್ನು ಬೇರೆಡೆಗೆ ಸ್ಥಳಾಂತರಿಸಬೇಕೆಂದು ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಈ ಮಧ್ಯೆ ವಿಷಾನಿಲ ದುರಂತದಲ್ಲಿ ಮೃತದೇಹಗಳನ್ನು ಕಿಂಗ್‌ಜಾರ್ಜ್ ಆಸ್ಪತ್ರೆಯಿಂದ ಮೃತರ ಮನೆಗಳಿಗೆ ಕೊಂಡೊಯ್ಯುತ್ತಿದ್ದ ಆ್ಯಂಬುಲೆನ್ಸ್‌ಗಳು ಆ ದಾರಿಯಾಗಿ ಹಾದುಹೋಗುತಿದ್ದಾಗ ಗ್ರಾಮಸ್ಥರು ಅವನ್ನು ತಡೆದರು ಹಾಗೂ ಶವಗಳನ್ನು ಎತ್ತಿಕೊಂಡುಬಂದು ಕಂಪೆನಿಯ ಗೇಟ್‌ನ ಮುಂದಿರಿಸಿ ಪ್ರತಿಭಟನೆ ನಡೆಸಿದರು.
ವಿಷಾನಿಲ ದುರಂತಕ್ಕೆ ಸಂಬಂಧಿಸಿ ಕಾರ್ಖಾನೆಯ ಆಡಳಿತ ಮಂಡಳಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರಾದರೂ, ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ನಾವು ಯಾವುದೇ ಸಂದರ್ಭದಲ್ಲಿ ಕಾರ್ಖಾನೆಯನ್ನು ನಡೆಸಲು ಬಿಡುವುದಿಲ್ಲವೆಂದು ಪ್ರತಿಭಟನಕಾರರೊಬ್ಬರು ಹೇಳಿದ್ದಾರೆ.
ಉದ್ರಿಕ್ತ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು. ಹಲವು ಮಂದಿ ಪ್ರತಿಭಟನಕಾರರನ್ನು ವಶಕ್ಕೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಅವರನ್ನು ಗೋಪಾಲಪಟ್ಟಣಂನ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆಯೆಂದು ನಗರ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಮೀನಾ ತಿಳಿಸಿದ್ದಾರೆ.