ಹೊರರಾಜ್ಯದಲ್ಲಿ ಸಿಲುಕಿರುವ ಕನ್ನಡಿಗರು: ವಾಪಸ್ಸಾಗಲು ಅನುಮತಿ ಸಿಗದೆ ಆಕ್ರೋಶ

ಬೆಂಗಳೂರು, ಮೇ 9: ಕೊರೋನ ಲಾಕ್‍ಡೌನ್ ಸಂದರ್ಭದಲ್ಲಿ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರು ಕರ್ನಾಟಕಕ್ಕೆ ಬರಲಾಗದೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಸುಮಾರು 60 ಸಾವಿರಕ್ಕೂ ಹೆಚ್ಚು ಮಂದಿ ಕನ್ನಡಿಗರು ರಾಜ್ಯಕ್ಕೆ ಬರಲು ಅವರು ಇರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.
ಕೊರೋನ ವೈರಸ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲಿ ಕೇಂದ್ರ ಸರಕಾರ ಲಾಕ್‍ಡೌನ್ ವಿಸ್ತರಣೆ ಮಾಡುತ್ತಲೇ ಇದೆ. ಆದರೆ, ಬಹುತೇಕ ಕನ್ನಡಿಗರು ರಾಜ್ಯಕ್ಕೆ ವಾಪಸ್ಸಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದರೂ ಅವರಿಗೆ ರಾಜ್ಯಕ್ಕೆ ವಾಪಸ್ಸಾಗಲು ಅನುಮತಿ ಸಿಗುತ್ತಿಲ್ಲ.
ಶಿಕ್ಷಣ, ಉದ್ಯೋಗ, ಪ್ರವಾಸ ಹಾಗೂ ಕೆಲಸದ ನಿಮಿತ್ತ ಇತರೆ ರಾಜ್ಯಕ್ಕೆ ಸಾಕಷ್ಟು ಮಂದಿ ತೆರಳಿದ್ದಾರೆ. ಈ ಪೈಕಿ 56,622 ಜನರು ರಾಜ್ಯಕ್ಕೆ ಬರಲು ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ 4,068 ಜನರಿಗೆ ರಾಜ್ಯಕ್ಕೆ ಬರಲು ಅನುಮತಿ ಸಿಕ್ಕಿದೆ. ಇನ್ನುಳಿದಂತೆ ಜಿಲ್ಲಾಧಿಕಾರಿಗಳ ಬಳಿ 45,326 ಹಾಗೂ ನೊಡಲ್ ಅಧಿಕಾರಿಗಳ ಬಳಿ 6,749 ಸೇರಿ ಒಟ್ಟು 52,075 ಅರ್ಜಿ ಬಾಕಿ ಉಳಿದಿವೆ.
ನಾವು ಕರ್ನಾಟಕಕ್ಕೆ ಬರಲು ಸಿದ್ಧರಿದ್ದೇವೆ. ಆದರೆ, ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿಲ್ಲ. ಒಂದು ಸಾವಿರ ಮಂದಿ ಆದಲ್ಲಿ ರೈಲಿನ ವ್ಯವಸ್ಥೆ ಮಾಡಲಾಗುತ್ತದೆ ಇಲ್ಲವೇ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಾಜಕಾರಣಿಗಳು ಭರವಸೆ ನೀಡುತ್ತಿದ್ದಾರೆ. ಆದರೆ, ಇದುವರೆಗೆ ಯಾವುದೂ ಆಗಿಲ್ಲ. ನಾವು ಕರ್ನಾಟಕಕ್ಕೆ ವಾಪಸ್ ಬರಲು ಸಾಧ್ಯವೇ ಆಗುತ್ತಿಲ್ಲ. ಕೊರೋನ ವೈರಸ್ ಸೋಂಕು ಹರಡುತ್ತಿರುವುದರಿಂದ ನಮ್ಮ ಮನೆಯಲ್ಲಿರುವವರು ಆತಂಕಿತರಾಗಿದ್ದಾರೆ. ಹೇಗಾದರೂ ಸರಿಯೇ ನಮ್ಮನ್ನು ಕರ್ನಾಟಕ ಸರಕಾರ ವಾಪಸ್ ಕರೆಸಿಕೊಳ್ಳಲಿ. ಅವರು ಹೇಳಿದಂತೆ 14 ದಿನ ಕ್ವಾರಂಟೈನ್‍ನಲ್ಲಿ ಇರಲು ಸಿದ್ಧ ಎಂದು ಹೊರರಾಜ್ಯದಲ್ಲಿರುವ ಕನ್ನಡಿಗರು ಹೇಳುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಪ್ರತಿಕ್ರಿಯಿಸಿ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಕನ್ನಡಿಗರನ್ನು ಕರೆಸಿಕೊಳ್ಳುವುದು ವಿಳಂಬವಾಗಿದೆ. ಆಯಾ ರಾಜ್ಯದಿಂದ ಕರೆಸಿಕೊಳ್ಳುವ ಸಂಬಂಧ ಈಗಾಗಲೇ ಮಾತುಕತೆಗಳು ಪೂರ್ಣಗೊಂಡಿವೆ. ಶೀಘ್ರವೇ ವಾಪಸ್ ಕರೆಸಿಕೊಳ್ಳುವ ಕಾರ್ಯವಾಗಲಿದೆ. ಈ ಬಗ್ಗೆ ಕನ್ನಡಿಗರು ಆತಂಕಗೊಳ್ಳುವುದು ಬೇಡ ಎನ್ನುತ್ತಾರೆ.







