ಬಡವರು, ನಿರ್ಗತಿಕರ ಪಾಲಿನ ಆಶಾಕಿರಣ ಬೆಂಗಳೂರಿನ ರೋಟಿ ಚಾರಿಟಿ ಟ್ರಸ್ಟ್

ಬೆಂಗಳೂರು, ಮೇ 9: ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಘೋಷಿಸಲಾಗಿರುವ ಲಾಕ್‍ಡೌನ್‍ನಿಂದಾಗಿ ಪ್ರಮುಖವಾಗಿ ಸಂಕಷ್ಟಕ್ಕೆ ಗುರಿಯಾಗಿರುವುದು ಬಡವರು ಹಾಗೂ ನಿರ್ಗತಿಕರು. ಈ ವರ್ಗದವರ ಹಸಿವು ನೀಗಿಸುವ ಕಾರ್ಯಕ್ಕೆ ಮುಂದಾಗಿರುವುದು ಬೆಂಗಳೂರಿನ ತಿಲಕ್ ನಗರದಲ್ಲಿರುವ ರೋಟಿ ಚಾರಿಟಿ ಟ್ರಸ್ಟ್.
ಸೈಯ್ಯದ್ ಗುಲಾಬ್ ಎಂಬವರು 2016ರ ಮಾರ್ಚ್‍ನಿಂದ ಪ್ರತಿದಿನ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಹೊರ ಭಾಗದಲ್ಲಿ ಸುಮಾರು 700 ಮಂದಿಗೆ ಉಚಿತವಾಗಿ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟ ವಿತರಣೆ ಮಾಡುತ್ತಿದ್ದಾರೆ.
ತಮ್ಮ ಸ್ನೇಹಿತನೊಬ್ಬನ ಮಗಳು ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾಗ ಆಕೆಯನ್ನು ನೋಡಲು ಹೋಗಿದ್ದ ಸೈಯ್ಯದ್ ಗುಲಾಬ್, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ರೋಗಿಗಳ ಸಂಬಂಧಿಕರು ಊಟಕ್ಕಾಗಿ ಪರದಾಡುವ ಸ್ಥಿತಿಯನ್ನು ಕಂಡರು. ರವಿವಾರದಂದು ಆಸ್ಪತ್ರೆಯ ಕ್ಯಾಂಟೀನ್ ಕೂಡ ಮುಚ್ಚಿರುತ್ತದೆ. ಇದರಿಂದ, ರೋಗಿಗಳ ಸಂಬಂಧಿಕರು ಹೊಟೇಲ್‍ಗಳಿಗಾಗಿ ಒಂದೆರಡು ಕಿ.ಮೀ. ನಡೆದುಕೊಂಡು ಹೋಗಬೇಕಿದೆ.
ಈ ಪರಿಸ್ಥಿತಿಯನ್ನು ಕಣ್ಣಾರೆ ನೋಡಿ ಸೈಯ್ಯದ್ ಗುಲಾಬ್ ಆರಂಭದಲ್ಲಿ ಕೇವಲ ರವಿವಾರದಂದು ಮಧ್ಯಾಹ್ನ 200 ಮಂದಿಗೆ ಊಟ ಕೊಡುವ ನಿರ್ಧಾರ ಮಾಡಿ ಕೆಲಸ ಆರಂಭಿಸಿದರು. ಸುಮಾರು 6 ತಿಂಗಳು ಈ ಕೆಲಸ ಮಾಡಿದ ನಂತರ, ಇದೇ ರೀತಿ ಹೈದರಾಬಾದ್‍ನಲ್ಲಿ ಕಳೆದ 10 ವರ್ಷಗಳಿಂದ ಬಡವರಿಗೆ ಉಚಿತ ಊಟ ಕೊಡುತ್ತಿರುವ ಅಝರ್ ಮಖ್ಸೂಸಿ, ಸೈಯ್ಯದ್ ಗುಲಾಬ್ ಅವರನ್ನು ಸಂಪರ್ಕಿಸಿ ವಾರಕ್ಕೊಮ್ಮೆ ಊಟ ಕೊಡುವ ಬದಲು ಪ್ರತಿದಿನ ಕೊಡುವ ಕೆಲಸಕ್ಕೆ ಮುಂದಾದರೆ ನಮ್ಮಿಂದ ಸಹಾಯ ಕೊಡುವುದಾಗಿ ಭರವಸೆ ನೀಡಿದರು.
ಮುಂದಿನ ದಿನದಿಂದಲೆ ವಾರಕ್ಕೊಮ್ಮೆ ಬದಲು ಪ್ರತಿದಿನ ಮಧ್ಯಾಹ್ನದ ಊಟ ಕೊಡುವ ಕೆಲಸ ಆರಂಭವಾಯಿತು. ಸುಮಾರು ಎರಡು ವರ್ಷಗಳ ಹಿಂದೆ ವೆಂಕಟರಾಮನ್ ಎಂಬ ಸಮಾಜ ಸೇವಕರು ಇವರ ಜೊತೆ ಕೈ ಜೋಡಿಸಿ ಬೆಳಗಿನ ಉಪಾಹಾರವನ್ನು ಇವರ ಮೂಲಕ ಬಡವರು, ನಿರ್ಗತಿಕರಿಗೆ ತಲುಪಿಸುತ್ತಿದ್ದಾರೆ. ಇದೀಗ ಸರಾಸರಿ ಪ್ರತಿದಿನ 700 ಮಂದಿಗೆ ಉಚಿತ ಉಪಾಹಾರ ಹಾಗೂ ಊಟ ಲಭ್ಯವಾಗುತ್ತಿದೆ.
ಕೋವಿಡ್ ಲಾಕ್‍ಡೌನ್ ಹಿನ್ನೆಲೆಯಲ್ಲಿ ಈಗ ಆಸ್ಪತ್ರೆ ಆವರಣದಲ್ಲಿ ಊಟವನ್ನು ಪಾರ್ಸೆಲ್ ಮೂಲಕ ವಿತರಿಸಲಾಗುತ್ತಿದೆ. ಇವರ ಕೆಲಸವನ್ನು ಮೆಚ್ಚಿ ಝೊಮಾಟೊ ಸಂಸ್ಥೆ ಐದು ಸಾವಿರ ರೇಷನ್ ಕಿಟ್‍ಗಳನ್ನು ನೀಡಿ, ಅರ್ಹರಿಗೆ ತಲುಪಿಸುವ ಜವಾಬ್ದಾರಿ ವಹಿಸಿದೆ.
ಬೆಳ್ಳಂದೂರು, ಬೇಗೂರು, ಮಾರತ್‍ಹಳ್ಳಿ, ಸರ್ಜಾಪುರ ರಸ್ತೆಯಲ್ಲಿ ಬಹಳಷ್ಟು ಮಂದಿ ವಲಸೆ ಕಾರ್ಮಿಕರು ಶೆಡ್‍ಗಳನ್ನು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅಂತಹವರನ್ನು ಗುರುತಿಸಿ ರೇಷನ್ ಕಿಟ್‍ಗಳನ್ನು ವಿತರಣೆ ಮಾಡುತ್ತಿದ್ದೇವೆ. 10 ಮಂದಿ ಸ್ನೇಹಿತರು ಸ್ವಯಂಪ್ರೇರಿತವಾಗಿ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಭವಿಷ್ಯದಲ್ಲಿ ಬಡವರ ಸೇವೆಗೆ ಮತ್ತಷ್ಟು ಕೆಲಸ ಮಾಡುವ ಮನಸ್ಸಿದೆ.
-ಸೈಯ್ಯದ್ ಗುಲಾಬ್, ರೋಟಿ ಚಾರಿಟಿ ಟ್ರಸ್ಟ್ ಅಧ್ಯಕ್ಷ









