ಟ್ರಕ್ ಅಪಘಾತ: ಐವರು ವಲಸೆ ಕಾರ್ಮಿಕರು ಮೃತ್ಯು, 15 ಮಂದಿ ಗಂಭೀರ

ಸಾಂದರ್ಭಿಕ ಚಿತ್ರ
ನರಸಿಂಗಪುರ (ಮಧ್ಯಪ್ರದೇಶ): ವಲಸೆ ಕಾರ್ಮಿಕರು ಪ್ರಯಾಣಿಸುತ್ತಿದ್ದ ಟ್ರಕ್ ಮಗುಚಿ ಬಿದ್ದು, ಐವರು ಸ್ಥಳದಲ್ಲೇ ಮೃತಪಟ್ಟು ಇತರ 15 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ.
ಭೋಪಾಲ್ನಿಂದ ಸುಮಾರು 200 ಕಿಲೋಮೀಟರ್ ದೂರದ ಹಳ್ಳಿಯಲ್ಲಿ ಈ ಅಪಘಾತ ಸಂಭವಿಸಿದೆ. 20 ಮಂದಿ ವಲಸೆ ಕಾರ್ಮಿಕರು ಹೈದರಾಬಾದ್ನಿಂದ ಮಧ್ಯಪ್ರದೇಶದ ಝಾನ್ಸಿಗೆ ಹೊರಟಿದ್ದರು. ಉತ್ತರ ಪ್ರದೇಶದ ಪಟ್ಟಣವೊಂದರಲ್ಲಿ ಮಾವಿನಹಣ್ಣು ಒಯ್ಯುವ ಲಾರಿ ಏರಿದ್ದರು.
ಈ ಟ್ರಕ್ ನರಸಿಂಗಪುರ ಗ್ರಾಮದಲ್ಲಿ ಮಗುಚಿಕೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಈ ಪೈಕಿ ಒಬ್ಬರಿಗೆ ಕೊರೋನ ಸೋಂಕು ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲರನ್ನೂ ಪರೀಕ್ಷೆಗೆ ಗುರಿಪಡಿಸಲಾಗಿದೆ.
ಮಹಾರಾಷ್ಟ್ರದ ಜಲ್ನಾದಿಂದ ಕಾಲ್ನಡಿಗೆಯಲ್ಲಿ ಹೊರಟಿದ್ದ ಕಾರ್ಮಿಕರ ಮೇಲೆ ಸರಕು ಸಾಗಾಣಿಕೆ ರೈಲು ಚಲಿಸಿ 16 ಮಂದಿ ಮೃತಪಟ್ಟ ಘಟನೆಯ ಬೆನ್ನಲ್ಲೇ ಈ ದುರಂತ ಸಂಭವಿಸಿದೆ.
Next Story





