ವಿದೇಶ, ಹೊರ ರಾಜ್ಯಗಳಿಂದ ಬರುವವರಿಗೆ ಪುತ್ತೂರಿನಲ್ಲಿ ಕ್ವಾರಂಟೈನ್ ಗೆ ಸಿದ್ಧ: ತಹಶೀಲ್ದಾರ್ ರಮೇಶ್ ಬಾಬು

ಸಾಂದರ್ಭಿಕ ಚಿತ್ರ
ಪುತ್ತೂರು, ಮೇ.10: ವಿದೇಶಗಿಳಿಂದ ಮತ್ತು ಹೊರ ರಾಜ್ಯಗಳಿಂದ ಬರುವವರನ್ನು ಕ್ವಾರಂಟೈನ್ನಲ್ಲಿರಿಸಲು ಸರ್ಕಾರ ರೂಪಿಸಿದ ಯೋಜನೆಗೆ ಪೂರಕವಾಗಿ ಪುತ್ತೂರಿನಲ್ಲಿ ಒಟ್ಟು 16 ವಿದ್ಯಾರ್ಥಿ, ವಿದ್ಯಾರ್ಥಿನಿಯರ ನಿಲಯಗಳನ್ನು ಗುರುತಿಸಲಾಗಿದ್ದು, ನಿಲಯದಲ್ಲಿರುವ ಸೌಲಭ್ಯಗಳ ಬಗ್ಗೆ ಜಿಲ್ಲಾಡಳಿತಕ್ಕೆ ಪಟ್ಟಿ ಕಳುಹಿಸಲಾಗಿದೆ ಎಂದು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ಟಿ ತಿಳಿಸಿದ್ದಾರೆ.
ಪುತ್ತೂರಿನ ಶ್ರೀ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಾದ ಬೀರಮಲೆ, ಪುತ್ತೂರು ನಗರ, ಉಪ್ಪಿನಂಗಡಿ, ಸರ್ವೆ, ಬಾಲಕಿಯರ ವಿದ್ಯಾರ್ಥಿನಿ ನಿಲಯಗಳಾದ ಬನ್ನೂರು, ಬೆಟ್ಟಂಪಾಡಿ, ಪುತ್ತೂರು ಕೇಂದ್ರ ಸ್ಥಾನ, ಪುತ್ತೂರು ನಗರ ವಿದ್ಯಾರ್ಥಿ ನಿಲಯಗಳನ್ನು ಗುರುತಿಸಲಾಗಿದ್ದು, ಇಲ್ಲಿ ಒಟ್ಟು 55 ಕೊಠಡಿಗಳು, 18 ಹಾಲ್, 80 ಸ್ನಾನಗೃಹ, 87 ಶೌಚಾಲಯಗಳ ವ್ಯವಸ್ಥೆಯಿದೆ.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳಾದ ಕೊಣಾಲು, ಕೊಂಬೆಟ್ಟು, ಕಡಬ ವಿದ್ಯಾರ್ಥಿ ನಿಲಯ, ಹಾರಾಡಿ, ಸಾಲ್ಮರ, ಉಪ್ಪಿನಂಗಡಿ, ಪಾಳ್ಯತ್ತಡ್ಕ ವಿದ್ಯಾರ್ಥಿನಿ ನಿಲಯಗಳನ್ನು ಗುರುತಿಸಲಾಗಿದ್ದು, ಇಲ್ಲಿ ಒಟ್ಟು 37 ಕೊಠಡಿಗಳು ಹಾಗೂ 15 ಹಾಲ್ಗಳು ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.





