ಒಂದೇ ದಿನ 22 ಮಂದಿಗೆ ಸೋಂಕು ದೃಢ: ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ 107ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ
ಬೆಳಗಾವಿ, ಮೇ 10: ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಕೊರೋನ ಆರ್ಭಟ ಮುಂದುವರಿದಿದ್ದು, ರಾಜಸ್ಥಾನದ ಅಜ್ಮೀರ್ ನಿಂದ ಹಿಂದಿರುಗಿದ್ದ 22 ಮಂದಿಗೆ ರವಿವಾರ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಸದ್ಯ ಇವರೆಲ್ಲರನ್ನೂ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಮಾರ್ಚ್ ತಿಂಗಳಲ್ಲಿ ರಾಜಸ್ಥಾನದ ಅಜ್ಮೀರ್ ಗೆ ಹೋಗಿದ್ದ ಬೆಳಗಾವಿ ಜಿಲ್ಲೆಯ 38 ಮಂದಿ ಲಾಕ್ಡೌನ್ ಜಾರಿಯಿಂದಾಗಿ ಅಲ್ಲಿಯೇ ಸಿಲುಕಿದ್ದರು. ಇತ್ತೀಚಿಗೆ ಲಾಕ್ಡೌನ್ ಸಡಿಲಿಕೆಯಿಂದಾಗಿ ಬೆಳಗಾವಿ ಜಿಲ್ಲೆ ಕಡೆಗೆ ಬಂದಿದ್ದರು. ಪೊಲೀಸರು ಹಾಗೂ ಇನ್ನಿತರ ಅಧಿಕಾರಿಗಳು ಇವರನ್ನು ತಡೆದು ನಿಪ್ಪಾಣಿ ತಾಲೂಕಿನ ಹೊರವಲಯದಲ್ಲಿಯೇ ವಿಚಾರಣೆ ನಡೆಸಿ, ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದ್ದರು.
ಬಳಿಕ ತಂಡದಲ್ಲಿದ್ದ 38 ಮಂದಿಯ ಗಂಟಲು ದ್ರವದ ಮಾದರಿಯನ್ನು ಮೇ 7ರಂದು ಪರೀಕ್ಷೆಗಾಗಿ ರವಾನಿಸಲಾಗಿತ್ತು. ಇವರಲ್ಲಿ 22 ಮಂದಿಗೆ ಕೊರೋನ ಸೋಂಕು ಇರುವುದು ದೃಢಪಟ್ಟಿದ್ದು, ಈ ಎಲ್ಲ 22 ಮಂದಿಯೂ ಬೆಳಗಾವಿ ಜಿಲ್ಲೆಯ ರಾಯಭಾಗ, ಹುಕ್ಕೇರಿ, ಸಂಕೇಶ್ವರ, ಚಿಕ್ಕೋಡಿ, ನಿಪ್ಪಾಣಿ, ಬೆಳಗಾವಿ ನಗರ ಹಾಗೂ 8 ಮಂದಿ ಬಾಗಲಕೋಟೆ ಜಿಲ್ಲೆಗೆ ಸಂಬಂಧಿಸಿದವರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಸೋಂಕಿತರ 22 ಮಂದಿಯಲ್ಲಿ 6 ಮಂದಿ ವಿವಿಧೆಡೆಯ ಪ್ರವಾಸಿ ಮಂದಿರಗಳಲ್ಲಿ ಅಡುಗೆಯರಾಗಿ ಕೆಲಸ ಮಾಡುವವರಿದ್ದಾರೆ. ಸೋಂಕಿತರೆಲ್ಲರಿಗೂ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಂಕಿತರಲ್ಲಿ 3, 6, 8 ವರ್ಷ ವಯಸ್ಸಿನ ಚಿಕ್ಕ ಮಕ್ಕಳು ಹಾಗೂ ಮಹಿಳೆಯರು ಹೆಚ್ಚಿನವರಿದ್ದಾರೆ.
ಅಜ್ಮೀರ್ ಗೆ ಹೋಗಿ ಬಂದಿದ್ದವರನ್ನು ಸಕಾಲದಲ್ಲಿ ತಡೆದು ಕ್ವಾರಂಟೈನ್ನಲ್ಲಿ ಇರಿಸುವ ಮೂಲಕ ಸೋಂಕು ಮತ್ತಷ್ಟು ಮಂದಿಗೆ ಹರಡುವುದನ್ನು ತಡೆದಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 107 ಆಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮನೆ ಮಾಡಿದೆ. ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಒಟ್ಟು 107 ಸೋಂಕಿತರ ಪೈಕಿ 36ಕ್ಕೂ ಹೆಚ್ಚು ಜನರು ಗುಣಮುಖರಾಗಿದ್ದಾರೆ.







