ಉಡುಪಿ: ಹೊರರಾಜ್ಯದಿಂದ 471 ಸೇರಿ ಜಿಲ್ಲೆಗೆ 2562 ಮಂದಿ ಆಗಮನ
ಉಡುಪಿ, ಮೇ 10: ನೋವೆಲ್ ಕೊರೋನ ವೈರಸ್ (ಕೋವಿಡ್-19) ನಿಯಂತ್ರಣಕ್ಕಾಗಿ ದೇಶಾದ್ಯಂತ ವಿಧಿಸಿದ ಲಾಕ್‌ಡೌನ್‌ಗೆ ರಾಜ್ಯದಲ್ಲಿ ಕೆಲ ರಿಯಾಯಿತಿಗಳನ್ನು ನೀಡಿದ ಬಳಿಕ ಹೊರರಾಜ್ಯ ಹಾಗೂ ಹೊರಜಿಲ್ಲೆಗಳಲ್ಲಿ ಸಿಕ್ಕಿಹಾಕಿಕೊಂಡಿರುವವರಿಗೆ ಉಡುಪಿ ಜಿಲ್ಲೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇದನ್ನು ಬಳಸಿಕೊಂಡು ಹೊರರಾಜ್ಯಗಳ 471 ಮಂದಿ ಸೇರಿದಂತೆ ಇಂದಿನವರೆಗೆ ಒಟ್ಟು 2562 ಮಂದಿ ಜಿಲ್ಲೆಯನ್ನು ಪ್ರವೇಶಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.
ಹೀಗೆ ಜಿಲ್ಲೆಯನ್ನು ಪ್ರವೇಶಿಸುವವರ ಮೇಲೆ ನಿಗಾ ಇರಿಸಲು ಜಿಲ್ಲೆಯಲ್ಲಿ 12 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಇವುಗಳ ಮೂಲಕ ಈಗ ಹೊರರಾಜ್ಯ ಹಾಗೂ ಹೊರಜಿಲ್ಲೆಗಳ ಮಂದಿ ಉಡುಪಿ ಜಿಲ್ಲೆಗೆ ಆಗಮಿಸು ತಿದ್ದಾರೆ.
ಇದುವರೆಗೆ ಸಿಕ್ಕಿರುವ ಮಾಹಿತಿಯಂತೆ ಹೆಜಮಾಡಿ ಚೆಕ್‌ಪೋಸ್ಟ್ ಮೂಲಕ 622 ಮಂದಿ, ಶಿರೂರು ಚೆಕ್‌ಪೋಸ್ಟ್ ಮೂಲಕ 122 ಮಂದಿ, ಹೊಸಂಗಡಿ ಚೆಕ್‌ಪೋಸ್ಟ್ ಮೂಲಕ 546, ಸೋಮೇಶ್ವರ ಚೆಕ್‌ಪೋಸ್ಟ್ ಮೂಲಕ 667 ಮಂದಿ, ಸಾಣೂರು ಚೆಕ್‌ಪೋಸ್ಟ್ ಮೂಲಕ 319 ಮಂದಿ ಪ್ರವೇಶಿಸಿದ್ದಾರೆ. ಎಂದವರು ತಿಳಿಸಿದರು.
ಹೊರರಾಜ್ಯಗಳಿಂದ ಉಡುಪಿ ಜಿಲ್ಲೆಯ ವಿವಿದೆಡೆಗೆ ಆಗಮಿಸುವವರ ಮೇಲೆ ವಿಶೇಷ ನಿಗಾ ವಹಿಸಿದ್ದು, ಮೇ 4ರಿಂದ ಪ್ರಾರಂಭಿಸಿ ಇಂದಿನವರೆಗೆ 343 ಮಂದಿ ಪುರುಷರು, 97 ಮಂದಿ ಮಹಿಳೆಯರು ಹಾಗೂ 31 ಮಂದಿ ಮಕ್ಕಳು ಜಿಲ್ಲೆಯನ್ನು ಪ್ರವೇಶಿಸಿದ್ದಾರೆ ಎಂದು ಡಾ. ಸೂಡ ತಿಳಿಸಿದರು.
ಇವುಗಳಲ್ಲಿ ಕುಂದಾಪುರ ತಾಲೂಕಿಗೆ 172 ಮಂದಿ (130 ಪುರುಷರು, 20 ಮಹಿಳೆಯರು , 22 ಮಕ್ಕಳು) ಆಗಮಿಸಿದ್ದಾರೆ. ಉಳಿದಂತೆ ಬೈಂದೂರಿಗೆ 140 ಮಂದಿ (115 ಪುರುಷರು, 25 ಮಹಿಳೆಯರು), ಕಾರ್ಕಳಕ್ಕೆ 72 (43ಪು, 29ಮ), ಕಾಪುವಿಗೆ 6 (2ಪು, 3ಮ, 1ಮ), ಬ್ರಹ್ಮಾವರಕ್ಕೆ 19 (14ಪು, 3ಮ, 2ಮ), ಉಡುಪಿಗೆ 60 (37ಪು, 17ಮ, 6ಮ) ಹಾಗೂ ಹೆಬ್ರಿಗೆ 2 ಪುರುಷರು ಆಗಮಿಸಿದ್ದಾರೆ.
ಇವರು ತೆಲಂಗಾಣ, ಕೇರಳ, ಗುಜರಾತ್, ಗೋವಾ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶಗಳಿಂದ ಉಡುಪಿ ಜಿಲ್ಲೆಗೆ ಆಗಮಿಸಿದ್ದಾರೆ. ಮೇ 12ರ ಬಳಿಕ ವಿದೇಶಗಳಲ್ಲಿರುವವರು ಸಹ ವಿಶೇಷ ವಿಮಾನಗಳ ಮೂಲಕ ಉಡುಪಿ ಜಿಲ್ಲೆಗೆ ಆಗಮಿಸಲಿದ್ದು, ಅವರ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದೂ ಡಾ.ಸೂಡ ತಿಳಿಸಿದರು.







