ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಗಾರ್ಮೆಂಟ್ಸ್ ಗೆ ರಾಜ್ಯ ಸರಕಾರ ಅನುಮತಿ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮೇ 10: ಕೊರೋನ ವೈರಸ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಂಟೈನ್ಮೆಂಟ್ ಝೋನ್(ಕೆಂಪು ವಲಯ)ಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಗಾರ್ಮೆಂಟ್ಸ್(ಸಿದ್ಧ ಉಡುಪು) ಘಟಕಗಳನ್ನು ಆರಂಭಿಸಲು ಅನುಮತಿ ನೀಡಿದ್ದು, ಒಟ್ಟು ಕಾರ್ಮಿಕರ ಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಮಂದಿ ನೌಕರರಷ್ಟೇ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ಕೇಂದ್ರ ಸರಕಾರದ ಮಾರ್ಗಸೂಚಿ ಅನ್ವಯ ಕೈಗಾರಿಕೆಗಳ ಆರಂಭಕ್ಕೆ ಈ ಹಿಂದೆಯೇ ಷರತ್ತು ಬದ್ಧ ಅನುಮತಿ ನೀಡಿದ್ದ ಸರಕಾರ ಸಿದ್ಧ ಉಡುಪು ಘಟಕಗಳನ್ನು ಇದರಿಂದ ಹೊರಗಿಟ್ಟಿತ್ತು.
ಇದೀಗ ಅಧಿಕೃತವಾಗಿ ಅಮದು-ರಫ್ತು ಕೋಡ್(ಐಇಸಿ) ಹೊಂದಿರುವ ಮತ್ತು ಉಡುಪು ರಫ್ತು ಉತ್ತೇಜನ ಮಂಡಳಿಯಲ್ಲಿ(ಎಇಪಿಸಿ) ನೋಂದಣಿಯಾಗಿರುವ ಘಟಕಗಳು ಕಾರ್ಯಾರಂಭ ಮಾಡಬಹುದು ಎಂದು ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಹೊರಡಿಸಿರುವ ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.
ಕೇಂದ್ರ ಸರಕಾರ ಇತ್ತೀಚಿಗೆ ಎರಡು ವಾರಗಳ ಕಾಲ ಲಾಕ್ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ್ದು, ಎರಡು ವಾರಗಳ ಅವಧಿಯವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು. ಅಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.







