ಕಟ್ಟಡ ಕಾರ್ಮಿಕರ ಪರಿಹಾರ ಹಣ ಶೀಘ್ರ ಜಮೆ ಮಾಡಲು ಮನವಿ
ಉಡುಪಿ, ಮೇ 10: ಕೋವಿಡ್ -19 ಹಿನ್ನೆಲೆಯಲ್ಲಿ ಕಟ್ಟಡ ಕಾರ್ಮಿಕರಿಗೆ ಘೋಷಿಸಿರುವ 5000ರೂ. ಪರಿಹಾರ ಹಣ ಶೀಘ್ರ ಜಮೆಯಾಗುವಂತೆ ಆದೇಶ ನೀಡಲು ಆಗ್ರಹಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದೆ.
ಮುಖ್ಯಮಂತ್ರಿಗಳು ಕಟ್ಟಡ ಕಾರ್ಮಿಕರಿಗೆ ಘೋಷಿಸಿರುವ 5000ರೂ. ಪರಿಹಾರ ಹಣ ಜಿಲ್ಲೆಯಲ್ಲಿರುವ ಬಹುತೇಕ ಕಾರ್ಮಿಕರಿಗೆ ಜಮೆಯಾಗಿ ರುವುದಿಲ್ಲ. ಲಾಕ್‌ಡೌನ್‌ನಿಂದ ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದು ಅವರಿಗೆ ಆದಾಯಗಳಿಲ್ಲದೇ ಕಾರ್ಮಿಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಇತ್ತೀಚೆಗೆ ಲಾಕ್‌ಡೌನ್ ಸಡಿಲಿಕೆ ಆದೇಶದಿಂದ ನಿರ್ಮಾಣ ಕಾಮಗಾರಿಗೆ ಅವಕಾಶವಿದ್ದರೂ ಮರಳು ಸಮಸ್ಯೆಯಿಂದಾಗಿ ಕೆಲಸ ಕುಂಠಿತಗೊಂಡು ಆದಾಯಕ್ಕೆ ಮತ್ತೆ ಹೊಡೆತ ಬಿದ್ದಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಇನ್ನು ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು ನಿರ್ಮಾಣ ಕಾಮಗಾರಿಗಳು ಸಂಪೂರ್ಣ ನಿಲ್ಲಲಿದೆ. ಇವೆಲ್ಲದರ ಪರಿಣಾಮದಿಂದ ಈ ಬಾರಿಯ ಕಟ್ಟಡ ಕಾರ್ಮಿಕ ಕುಟುಂಬಗಳು ಅಕ್ಷರಶ: ಬೀದಿಗೆ ಬೀಳುವ ಅಪಾಯವಿದೆ. ಈ ಹಸಿವಿನ ವೇಳೆಯಲ್ಲಿ ಮುಖ್ಯಮಂತ್ರಿಗಳು ಘೋಷಿಸಿ ರುವ 5000ರೂ. ಹಣ ತ್ವರಿತ ಗತಿಯಲ್ಲಿ ಕಟ್ಟಡ ಕಾರ್ಮಿಕನ ಖಾತೆಗೆ ಜಮೆಯಾದರೆ ಅವರು ಹೊಟ್ಟೆ ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ ಜಮೆ ಯಾಗದೆ ಉಳಿದಿರುವ ಬಹುತೇಕ ಕಾರ್ಮಿಕರಿಗೆ ಕೂಡಲೇ ಜಮೆ ಮಾಡಲು ಕಾರ್ಮಿಕ ಇಲಾಖೆಗೆ ಆದೇಶ ನೀಡಬೇಕೆಂದು ಸಮಿತಿಯ ಸಂಚಾಲಕರಾದ ಸುರೇಶ್ ಕಲ್ಲಾಗರ ಕುಂದಾಪುರ, ಶೇಖರ ಬಂಗೇರ ಉಡುಪಿ, ರಾಜೀವ ಪಡು ಕೋಣೆ ಬೈಂದೂರು ಮನವಿಯಲ್ಲಿ ಒತ್ತಾಯಿಸಿದ್ದಾರೆ.







