ಟ್ರಂಪ್ ಕೊರೋನ ವೈರಸ್ ನಿಭಾಯಿಸುವ ರೀತಿ ‘ಅತ್ಯಂತ ಗೊಂದಲಕಾರಿ’
ಸೋರಿಕೆಯಾದ ಆಡಿಯೋದಲ್ಲಿ ಒಬಾಮ

ವಾಶಿಂಗ್ಟನ್, ಮೇ 10: ಕೊರೋನ ವೈರಸ್ ಸಾಂಕ್ರಾಮಿಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಭಾಯಿಸುತ್ತಿರುವ ರೀತಿಯನ್ನು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಟೀಕಿಸಿದ್ದಾರೆ ಹಾಗೂ ಪರಿಸ್ಥಿತಿ ಅತ್ಯಂತ ಗೊಂದಲಕಾರಿಯಾಗಿದೆ ಎಂದು ಬಣ್ಣಿಸಿದ್ದಾರೆ.
ತನ್ನ ಹಿಂದಿನ ಸರಕಾರದ ಸದಸ್ಯರೊಂದಿಗೆ ಶುಕ್ರವಾರ ರಾತ್ರಿ ವೆಬ್ ಕಾಲ್‌ನಲ್ಲಿ ಮಾತನಾಡಿದ ಅವರು, ಟ್ರಂಪ್‌ರ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕಲ್ ಫ್ಲಿನ್ ವಿರುದ್ಧದ ಆರೋಪಗಳನ್ನು ಕೈಬಿಡುವ ಕಾನೂನು ಇಲಾಖೆಯ ನಿರ್ಧಾರವನ್ನೂ ಖಂಡಿಸಿದರು. ಅಮೆರಿಕದ 2016ರ ಅಧ್ಯಕ್ಷೀಯ ಚುನಾವಣೆಯ ಮೇಲೆ ರಶ್ಯ ಪ್ರಭಾವ ಬೀರಿತ್ತೇ ಎಂಬ ಬಗ್ಗೆ ನಡೆದ ತನಿಖೆಯಲ್ಲಿ ಎಫ್‌ಬಿಐಗೆ ಸುಳ್ಳು ಹೇಳಿರುವುದನ್ನು ಫ್ಲಿನ್ ಒಪ್ಪಿಕೊಂಡಿದ್ದಾರೆ. ಟ್ರಂಪ್ ಆಡಳಿತದ ನಿರ್ಧಾರವು ಅಮೆರಿಕದ ಕಾನೂನಿನ ಆಡಳಿತವನ್ನು ಅಪಾಯಕ್ಕೆ ಗುರಿಪಡಿಸುತ್ತದೆ ಎಂದು ಒಬಾಮ ಬಣ್ಣಿಸಿದರು.
ಒಬಾಮ ತನ್ನ ಮಾಜಿ ಸಹಾಯಕರೊಂದಿಗೆ ನಡೆಸಿರುವ ವೆಬ್ ಫೋನ್ ಕರೆಯು ಸೋರಿಕೆಯಾಗಿದೆ. ಈ ಧ್ವನಿಮುದ್ರಿಕೆ ಮೊದಲು ಯಾಹೂ ನ್ಯೂಸ್‌ಗೆ ಸಿಕ್ಕಿದೆ.
ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ಡೆಮಾಕ್ರಟಿಕ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಜೋ ಬೈಡನ್‌ರನ್ನು ನಾವೆಲ್ಲರೂ ಬೆಂಬಲಿಸೋಣ ಎಂಬುದಾಗಿ ಒಬಾಮ ತನ್ನ ಮಾಜಿ ಸಹಾಯಕರನ್ನು ಒತ್ತಾಯಿಸಿದ್ದಾರೆ.
ಕೊರೋನ ವೈರಸ್ ಸೋಂಕಿತರು ಮತ್ತು ಸತ್ತವರ ಸಂಖ್ಯೆಯಲ್ಲಿ ಅಮೆರಿಕವು ಇತರೆಲ್ಲ ದೇಶಗಳಿಗಿಂತ ಮುಂದಿದೆ. ಅಲ್ಲಿ ಸೋಂಕಿತರ ಸಂಖ್ಯೆ 13 ಲಕ್ಷವನ್ನು ದಾಟಿದ್ದರೆ, ಮೃತರ ಸಂಖ್ಯೆ 77,000ವನ್ನು ಹಿಂದಿಕ್ಕಿದೆ.
ಸ್ವಾರ್ಥಿಯಾಗಿರುವುದು, ಹಿಂದಕ್ಕೆ ಹೋಗುವುದು, ವಿಭಜನೆಗೊಳ್ಳುವುದು ಮತ್ತು ಇತರರನ್ನು ಶತ್ರುಗಳೆಂಬಂತೆ ಕಾಣುವುದು ಅಮೆರಿಕದ ಈಗಿನ ಪ್ರವೃತ್ತಿಯಾಗಿದೆ. ಅದು ಈಗ ಅಮೆರಿಕ ಬದುಕಿನ ಪ್ರಬಲವಾದ ಅಂಶವಾಗಿದೆ ಹಾಗೂ ಇದು ದೀರ್ಘಕಾಲ ಚಾಲ್ತಿಯಲ್ಲಿರುವ ಸಾಧ್ಯತೆಯಿದೆ. ನಾವು ಇದರ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದು ಒಬಾಮ ತನ್ನ ಮಾಜಿ ಸಹಾಯಕರನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಅಮೆರಿಕ: ಮತ್ತೆ 1,500 ಮೀರಿದ ಸಾವಿನ ಸಂಖ್ಯೆ
ಅಮೆರಿಕದಲ್ಲಿ ನೂತನ-ಕೊರೋನ ವೈರಸ್‌ನಿಂದಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,568 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ 78,746ಕ್ಕೆ ಏರಿದೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯದ ಅಂಕಿ-ಅಂಶಗಳು ಶನಿವಾರ ತಿಳಿಸಿವೆ.
ಅಮೆರಿಕವು ಕೊರೋನ ವೈರಸ್ ಸಾಂಕ್ರಾಮಿಕದ ದಾಳಿಯಲ್ಲಿ ಅತಿ ಹೆಚ್ಚು ನಲುಗಿದ ದೇಶವಾಗಿದೆ.
ದೇಶದಲ್ಲಿ ಈಗ ಸಾಂಕ್ರಾಮಿಕದ ಸೋಂಕಿಗೆ ಒಳಗಾದವರ ಒಟ್ಟು ಸಂಖ್ಯೆ 13,09,164ಕ್ಕೆ ಏರಿದೆ.







