ಕೇವಲ ಪ್ರಚಾರಕ್ಕಾಗಿ ಸರಕಾರ 'ವಿಶೇಷ ಪ್ಯಾಕೇಜ್' ಘೋಷಿಸಿದೆ: ಕುಮಾರಸ್ವಾಮಿ ಆರೋಪ

ಬೆಂಗಳೂರು, ಮೇ 10: ಕೊರೋನ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಆಟೋ, ಟ್ಯಾಕ್ಸಿ ಚಾಲಕರು ಮತ್ತು ದೋಬಿ, ಕ್ಷೌರಿಕರು ಸೇರಿದಂತೆ ಇನ್ನಿತರ ಸಮುದಾಯಗಳಿಗೆ ರಾಜ್ಯ ಸರಕಾರ ಘೋಷಿಸಿರುವ 1,610 ಕೋಟಿ ರೂ.ವಿಶೇಷ ಪ್ಯಾಕೇಜ್ ಕೇವಲ ಪ್ರಚಾರಕ್ಕಾಗಿ ಮಾಡಿದ ಘೋಷಣೆಯಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ವಿಶೇಷ ಪ್ಯಾಕೇಜ್ ಹೆಸರಲ್ಲಿ ಶ್ರಮಿಕರಿಗೆ ದೋಖಾ ಮಾಡುವ ಕೆಲಸ ಮಾಡುತ್ತಿದ್ದು, ಯೋಜನೆ ಯಾವುದೇ ಕಾರಣಕ್ಕೂ ಯಶಸ್ಸು ಕಾಣುವುದಿಲ್ಲ. ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಸರಕಾರದ ವಿಶೇಷ ಪ್ಯಾಕೇಜ್ ನಿಜವಾದ ಫಲಾನುಭವಿಗಳಿಗೆ ಲಾಭ ಆಗುವುದಿಲ್ಲ. ಶ್ರಮಿಕ ವರ್ಗದ ಜನರು ಸಂಕಷ್ಟದಲ್ಲಿದ್ದಾರೆ. ಅವರ ನೆರವಿಗೆ ನಿಲ್ಲುವ ಈ ವೇಳೆ ಲೂಟಿ ಹೊಡೆಯುವ ಕೆಲಸವನ್ನು ಯಾರೂ ಮಾಡಬಾರದು. ಕೆಲ ವರ್ಗಗಳಿಗೆ ಸರಕಾರ ಪರಿಹಾರ ಘೋಷಣೆ ಮಾಡಿದೆ. ಆದರೆ, ಆ ವರ್ಗದ ಜನರನ್ನು ಗುರುತಿಸುವ ಕೆಲಸ ಆಗಿದೆಯಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಅರ್ಹರಿಗೆ ಸರಕಾರ ಹೇಗೆ ಪರಿಹಾರ ತಲುಪಿಸಲಾಗುತ್ತದೆ? ದಾನಿಗಳಿಂದ ಬಡವರು ಉಳಿದಿದ್ದಾರೆಯೇ ಹೊರತು ಸರಕಾರದಿಂದ ಖಂಡಿತ ಅಲ್ಲ. 1,610 ಕೋಟಿ ರೂ.ವಿಶೇಷ ಪ್ಯಾಕೇಜ್ ಯಾವ ರೀತಿಯಲ್ಲಿ ನೀಡಬೇಕು ಎಂಬುದರ ಕುರಿತು ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ ಎಂಬುದನ್ನು ಗಮನಿಸಬೇಕು ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ನೆರೆ ಹಾವಳಿಯಿಂದ ಮನೆ-ಮಠ ಕಳೆದುಕೊಂಡ ಜನರಿಗೆ ಪರಿಹಾರ ವಿಚಾರದಲ್ಲಿ ಈಗಾಗಲೇ ಸರಕಾರ ದೋಖಾ ಮಾಡಿದೆ. ಅದೇ ರೀತಿ ಈಗಲೂ ಕೊರೋನ ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಪ್ಯಾಕೇಜ್ ಹೆಸರಿನಲ್ಲಿ ಸರಕಾರ ದೋಖಾ ಮಾಡಲಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.







