ರಾಷ್ಟ್ರಧ್ವಜಕ್ಕೆ ಅವಮಾನ ಆರೋಪ: ಕ್ರಮಕ್ಕೆ ಒತ್ತಾಯ

ಮಂಗಳೂರು, ಮೇ 10: ಖಾಸಗಿ ದೋಣಿಯಲ್ಲಿ ರಾಷ್ಟ್ರಧ್ವಜವನ್ನು ಉಲ್ಟಾ ಹಾರಿಸಿ ಅವಮಾನ ಮಾಡಿರುವ ಘಟನೆ ರವಿವಾರ ಬೆಳಕಿಗೆ ಬಂದಿದೆ.
ಉಳ್ಳಾಲ ನೇತ್ರಾವತಿ ನದಿ ತೀರದ ನಿವಾಸಿಯೊಬ್ಬರು ತನ್ನ ಖಾಸಗಿ ಬೋಟ್‌ನಲ್ಲಿ ರಾಷ್ಟ್ರಧ್ವಜವನ್ನು ಬೇಕಾಬಿಟ್ಟಿಯಾಗಿ ಹಾರಿಸಿ ಅವಮಾನಿಸಿದ್ದಾರೆ ಎನ್ನಲಾಗಿದೆ.
ಖಾಸಗಿ ಶಿಪ್ ಒಂದರಲ್ಲಿ ಕ್ಯಾಪ್ಟನ್ ಆಗಿದ್ದ ಈ ವ್ಯಕ್ತಿ ಸದ್ಯ ನಿವೃತ್ತಿ ಆಗಿದ್ದಾರೆ. ಆದರೆ ಈತ ತನ್ನ ಖಾಸಗಿ ಸಂಚಾರಕ್ಕೆ ವೇಗದ ದೋಣಿಯನ್ನು ಉಪಯೋಗಿಸುತ್ತಿದ್ದು, ಆ ದೋಣಿಯಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾರಿಸುತ್ತಾ ಸಂಚಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಸ್ಥಳೀಯರು ವ್ಯಕ್ತಿಯ ಗಮನಕ್ಕೆ ತಂದರು ಕೂಡ ತಾನು ಇದೇ ರೀತಿ ಧ್ವಜ ಹಾರಿಸುವುದು. ನೀವು ಏನಾದರೂ ಮಾಡಿಕೊಳ್ಳಿ ಎಂದು ಉಡಾಫೆಯಿಂದ ವರ್ತಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದ ಈ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಶಾಸಕ ವೇದವ್ಯಾಸ್ ಕಾಮತ್ ಕೂಡ ಆ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವೀಟ್ ಮೂಲಕ ಪೊಲೀಸ್ ಆಯುಕ್ತರನ್ನು ಒತ್ತಾಯಿಸಿದ್ದಾರೆ.





