ನೌಕಾಪಡೆ ಹಡಗಿನಲ್ಲಿ ಮಾಲ್ದೀವ್ಸ್‌ನಿಂದ 698 ಭಾರತೀಯರ ಆಗಮನ

ಹೊಸದಿಲ್ಲಿ,ಮೇ 10: ಕೊರೋನಾ ವೈರಸ್ ಹರಡುವಿಕೆ ತಡೆಯಲು ವಿದೇಶ ಪ್ರಯಾಣಗಳಿಗೆ ನಿರ್ಬಂಧ ಹೇರಲಾಗಿರುವ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ದ್ವೀಪರಾಷ್ಟ್ರ ಮಾಲ್ದೀವ್ಸ್‌ನಲ್ಲಿ ಸಿಲುಕಿದ್ದ 698 ಮಂದಿ ಭಾರತೀಯರನ್ನು ರವಿವಾರ ಯಶಸ್ವಿಯಾಗಿ ತಾಯ್ನಿಡಿಗೆ ಕರೆತಂದಿದೆ.
ಐಎನ್‌ಎಸ್ ಜಲಾಶ್ವ ಹೆಸರಿನ ಯುದ್ಧನೌಕೆಯು, ಮಾಲ್ದೀವ್ಸ್‌ನಿಂದ ಇಂದು ಬೆಳಗ್ಗೆ 9:00ರ ವೇಳೆಗೆ ಕೇರಳದ ಕೊಚ್ಚಿಯ ಬಂದರಿಗೆ ತಲುಪಿದೆ.
ಮೇ 8ರಂದು ಮಾಲ್ದೀವ್ಸ್ ರಾಜಧಾನಿ ಮಾಲೆಯಿಂದ ಪ್ರಯಾಣ ಆರಂಭಿಸಿದ ಈ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರಲ್ಲಿ 19 ಮಂದಿ ಗರ್ಭಿಣಿಯರು ಕೂಡಾ ಇದ್ದರು.
‘‘ಮಾಲ್ದೀವ್ಸ್‌ನಿಂದ ಆಗಮಿಸಿದ ತಂಡದಲ್ಲಿ 595 ಪುರುಷರು ಹಾಗೂ 103 ಮಂದಿ ಮಹಿಳೆಯರಿದ್ದಾರೆ. ಇವರಲ್ಲಿ 10 ವರ್ಷಕ್ಕಿಂತ ಕೆಳಗಿನ 14 ಮಂದಿ ಮಕ್ಕಳು , 19 ಮಂದಿ ಗರ್ಭಿಣಿಯರು ಕೂಡಾ ಇದ್ದಾರೆ. ಬಹುತೇಕ ಪ್ರಯಾಣಿಕರು ತಮಿಳುನಾಡು ಹಾಗೂ ಕೇರಳೀಯರಾಗಿದ್ದಾರೆ. ಇತರ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಾಗರಿಕರು ಕೂಡಾ ಇರುವುದಾಗಿ ಕೊಚ್ಚಿ ಬಂದರು ಆಡಳಿತವು ಹೇಳಿಕೆಯೊಂದರಲ್ಲಿ ತಿಳಿಸಿದೆ.
‘‘ನಾವೀಗ ಸುರಕ್ಷಿತರಾಗಿದ್ದೇವೆ. ನಮಗೆ ಉತ್ತಮ ಅನುಭವವಾಗಿದೆ. ಈ ಸಿಬ್ಬಂದಿಯು ಅತ್ಯಂತ ಸ್ನೇಹಯುತವಾಗಿ ವರ್ತಿಸಿದರು. ನಮ್ಮನ್ನು ಅವರು ಚೆನ್ನಾಗಿ ನೋಡಿಕೊಂಡಿದ್ದಾರೆ’’ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರೊಬ್ಬರು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಮಾಲ್ಡೀವ್ಸ್‌ನಿಂದ ಸ್ವದೇಶಕ್ಕೆ ವಾಪಸಾಗುತ್ತಿರುವ ಭಾರತೀಯರನ್ನು ಕರೆತರುವ ಸೇವೆಗಾಗಿ ಭಾರತ ಸರಕಾರವು ಪ್ರತಿಒಬ್ಬ ಪ್ರಯಾಣಿಕನಿಗೆ 40 ಡಾಲರ್ (ಅಂದಾಜು 3021 ರೂ.) ಶುಲ್ಕವನ್ನು ವಿಧಿಸಿತ್ತು.
ಲಾಕ್‌ಡೌನ್‌ನಿಂದಾಗಿ ಹೊರದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ವಾಪಸ್ ಕರೆತರಲು ಕೇಂದ್ರ ಸರಕಾರ ಹಮ್ಮಿಕೊಂಡಿರುವ ಬೃಹತ್ ಕಾರ್ಯಾಚರಣೆ ‘ವಂದೇಭಾರತ್ ಮಿಶನ್’ ನ ಭಾಗವಾಗಿ ನೌಕಾಪಡೆಯು ಮಾಲ್ದೀವ್ಸ್‌ನಿಂದ ಭಾರತೀಯರನ್ನು ಕರೆತಂದಿದೆ.
ಭಾರತೀಯ ನೌಕಾಪಡೆಯ ಇನ್ನೊಂದು ಯುದ್ಧ ನೌಕೆ ಐಎನ್‌ಎಸ್ ಮಗರ್ ರವಿವಾರ ಮಾಲೆಗೆ ಆಗಮಿಸಿದೆ. ಮಾಲ್ಡೀವ್ಸ್‌ನಲ್ಲಿರುವ 27 ಭಾರತೀಯರ ಪೈಕಿ ಸುಮಾರು 4 ಸಾವಿರ ಮಂದಿ ಈ ಹಡಗಿನಲ್ಲಿ ಸ್ವದೇಶಕ್ಕೆ ಮರಳುವುದಕ್ಕಾಗಿ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ.
ಭಾರತೀಯ ನೌಕಾಪಡೆಯು ಒಟ್ಟು 12 ರಾಷ್ಟ್ರಗಳಿಂದ ಸುಮಾರು 15 ಸಾವಿರ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ್ಯಾಚರಣೆಯನ್ನು ಹಮ್ಮಿಕೊಂಡಿದೆ.







