ಕಾರ್ಪೋರೇಟರ್ ನಾಜಿಮಾ ಖಾನ್ ಮೇಲೆ ಪೊಲೀಸರಿಂದ ಹಲ್ಲೆ ಆರೋಪ: ಬೆಂಬಲಿಗರಿಂದ ಪ್ರತಿಭಟನೆ
ಬೆಂಗಳೂರು, ಮೇ 10: ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪಾದರಾಯನಪುರ ಕಾರ್ಪೋರೇಟರ್ ನಾಜಿಮಾ ಖಾನ್ ಆರೋಪಿಸಿದ ಹಿನ್ನಲೆ ರವಿವಾರ ನಾಜಿಮಾ ಖಾನ್ ಬೆಂಬಲಿಗರು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಚಾಮರಾಜಪೇಟೆಯ ಇನ್ಸ್ ಸ್ಪೆಕ್ಟರ್ ಕುಮಾರಸ್ವಾಮಿ ಅವರು ಆಸ್ಪತ್ರೆಯಿಂದ ಮರಳಿ ಬರುವಾಗ ಸುಖಾಸುಮ್ಮನೆ ಅಡ್ಡಗಟ್ಟಿ ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ನಾನು ಕಾರ್ಪೋರೇಟರ್ ಎಂದು ಹೇಳಿದರು ಕೇಳದೆ, ನನ್ನ ಐಡಿ ಕಾರ್ಡ್ ಕಸಿದುಕೊಂಡಿದ್ದಾರೆ. ನನ್ನ ಜೊತೆಯಲ್ಲಿ ಬಂದಿದ್ದ ನನ್ನ ತಮ್ಮನನ್ನು ನಿಂದಿಸಿದ್ದಾರೆ. ಅಲ್ಲದೇ, ನಾವು ನಮ್ಮಪ್ಪನ ಕೆಲಸ ಮಾಡುತ್ತಿಲ್ಲ ಇಲ್ಲಿ ಎಂದು ಬೈದಿದ್ದಾರೆ ಎಂದು ಪಾದರಾಯನಪುರದ ಕಾರ್ಪೋರೇಟರ್ ನಾಜಿಮಾ ಖಾನ್ ಅವರು ಆರೋಪಿಸಿದ್ದರು.
ಈ ಹಿನ್ನಲೆ ನಾಜಿಮಾ ಖಾನ್ ಅವರ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದು, ಸ್ಥಳಕ್ಕೆ ಮಾಜಿ ಸಚಿವ ಝಮೀರ್ ಅಹಮ್ಮದ್ ಖಾನ್ ಬರುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಪೋರೇಟರ್ ನಾಜಿಮಾ ಖಾನ್, ಸುಮ್ಮನೆ ನಿಂತುಕೊಂಡಿದ್ದ ಜನರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಾರೆ. ಸ್ಥಳದಲ್ಲಿ ನಾನೊಬ್ಬಳೇ ಮಹಿಳೆ ಇದ್ದಿದ್ದು, ಹೀಗಾಗಿ ನಾನು ವಾಪಸ್ ಬಂದೆ. ನನ್ನ ಗಾಡಿ ಮತ್ತೆ ಐಡಿ ಕಿತ್ತುಕೊಂಡಿದ್ದಾರೆ. ನಾನು ನಮ್ಮ ಜನರಿಗೆ ಪ್ರತಿಭಟನೆ ಮಾಡಬೇಡಿ ಎಂದು ಹೇಳಿದೆ. ಆದರೂ ಅವರು ಕೇಳುತ್ತಿಲ್ಲ. ನಿಮಗೇ ಈ ರೀತಿ ಮಾಡಿದ್ದಾರೆ ಎಂದರೆ ನಮ್ಮ ಸ್ಥಿತಿ ಏನು, ನಾವು ಇದರ ಬಗ್ಗೆ ಎಂಎಲ್‍ಎ ಅವರ ಬಳಿ ಮಾತನಾಡುತ್ತೇವೆ ಎಂದು ಪ್ರತಿಭಟನೆಗೆ ಕುಳಿತಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ನಾಜಿಮಾ ಖಾನ್ ಪತಿ, ನಾಜಿಮಾ ಖಾನ್ ತಲೆನೋವು ಇದ್ದ ಕಾರಣ ಆಸ್ಪತ್ರೆಗೆ ಅನುಮತಿ ಪಡೆದೇ ಹೋಗಿದ್ದರು. ಈ ಕಡೆಯಿಂದ ಹೋಗುವಾಗ ಸುಮ್ಮನೆ ಬಿಟ್ಟಿದ್ದಾರೆ. ಆದರೆ, ಆ ಕಡೆಯಿಂದ ಬರುವಾಗ ಸಿವಿಲ್ ಡ್ರೆಸ್‍ನಲ್ಲಿದ್ದ ಇನ್ಸ್ ಸ್ಪೆಕ್ಟರ್ ಕುಮಾರಸ್ವಾಮಿ ಅವರು ನಾಜಿಮಾ ಅವರನ್ನು ಅಡ್ಡಗಟ್ಟಿ ಐಡಿ ಕಿತ್ತುಕೊಂಡು ಗಾಡಿಯನ್ನು ಸೀಝ್ ಮಾಡಿದ್ದಾರೆ. ಈ ದೌರ್ಜನ್ಯವನ್ನು ಖಂಡಿಸಿ ನಮ್ಮ ಜನರು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನಾಜಿಮಾ ಖಾನ್ ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಆದರೂ ಅವರು ಕಾರ್ಪೋರೇಟರ್ ಎಂದು ಹೇಳಿಕೊಂಡು ಓಡಾಡುತ್ತಿದ್ದರು. ಶನಿವಾರ ರಾತ್ರಿ 9:30ರ ವೇಳೆಗೆ ನಾನು ಸ್ಥಳದಲ್ಲಿ ಇರುವ ಸಂದರ್ಭದಲ್ಲಿ ಬಂದರು. ಆಗ ನಾನು ಈ ಸಂದರ್ಭದಲ್ಲಿ ಓಡಾಡಬೇಡಿ ಎಂದಾಗ ನಾನು ಕಾರ್ಪೋರೇಟರ್ ಎಂದು ನನಗೆ ದಬಾಯಿಸಿದರು. ನೀವೇ ಈ ರೀತಿ ಮಾಡಿದರೆ ಎಲ್ಲರೂ ಈ ರೀತಿ ಮಾಡುತ್ತಾರೆ ಎಂದು ವಾರ್ನಿಂಗ್ ನೀಡಿ ಅವರ ಬೈಕ್ ಸೀಝ್ ಮಾಡಿದೆ. ಅಲ್ಲದೆ, ನಾಜಿಮಾ ಖಾನ್ ಹಾಗೂ ಅವರ ತಮ್ಮನ ಮೇಲೆ ಚಾಮರಾಜಪೇಟೆ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ.
-ಕುಮಾರಸ್ವಾಮಿ, ಚಾಮರಾಜಪೇಟೆ ಠಾಣೆ ಇನ್‍ಸ್ಪೆಕ್ಟರ್







