ಕೊರೋನ ಶಂಕಿತ ರೋಗಿಗೆ ಚಿಕಿತ್ಸೆ ನೀಡದೆ ಅಲೆದಾಡಿಸಿದ ವೈದ್ಯರು: ಆರೋಪ
ಬೆಂಗಳೂರು, ಮೇ 10: ಕೊರೋನ ಭೀತಿ ನಡುವೆಯೂ ವೈದ್ಯರು ಮಾನವೀಯತೆ ಮರೆತ ಘಟನೆ ನಡೆದಿದೆ ಎನ್ನಲಾಗಿದ್ದು, ರೋಗಿ ತೀವ್ರ ಜ್ವರದಿಂದ ಬಳಲುತ್ತಿದ್ದರೂ ಚಿಕಿತ್ಸೆ ನೀಡದೆ ಸರಕಾರಿ ಆಸ್ಪತ್ರೆಗಳ ವೈದ್ಯ ಸಿಬ್ಬಂದಿ ಅಮಾನವೀಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜ್ವರದಿಂದ ಬಳಲುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿ ಬೆಳಗ್ಗೆ ಲಗ್ಗೆರೆಯಲ್ಲಿರುವ ಸರಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಆದರೆ, ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ನಂತರ ಆ್ಯಂಬುಲೆನ್ಸ್ ಮೂಲಕ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲೂ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಲಾಗಿದೆ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಹೋಗುವಂತೆ ಸಿಬ್ಬಂದಿ ತಿಳಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡದೆ ಬೌರಿಂಗ್ ಆಸ್ಪತ್ರೆಗೆ ಹೋಗಲು ತಿಳಿಸಿದರೂ ಬೌರಿಂಗ್ ಆಸ್ಪತ್ರೆಯಲ್ಲೂ ಇದೇ ಕಥೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಆ್ಯಂಬುಲೆನ್ಸ್ ಸಿಬ್ಬಂದಿ ಮತ್ತೆ ಆ ವ್ಯಕ್ತಿಯನ್ನು ಲಗ್ಗೆರೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ಆದರೆ, ಲಗ್ಗೆರೆ ಆಸ್ಪತ್ರೆ ಸಿಬ್ಬಂದಿ ರೋಗಿ 2ನೆ ಸಲ ಬಂದರೂ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದ್ದಾರೆ. ಆಸ್ಪತ್ರೆಯ ಬಾಗಿಲಲ್ಲೇ ಒದ್ದಾಡುತ್ತಿದ್ದರೂ ಚಿಕಿತ್ಸೆ ನೀಡಲಿಲ್ಲ. ನಂತರ ಸ್ಥಳೀಯ ನಿವಾಸಿಗಳು ನಂದಿನಿ ಲೇಔಟ್ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ರೋಗಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.
ಆ್ಯಂಬುಲೆನ್ಸ್ ಜೊತೆಯೇ ಪೊಲೀಸರು ತೆರಳಿ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ರೋಗಿಗೆ ಕೊರೋನ ಲಕ್ಷಣವೂ ಕಂಡು ಬಂದಿರುವ ಮಾಹಿತಿ ಸಿಕ್ಕಿದ್ದು, ಬೌರಿಂಗ್ ಆಸ್ಪತ್ರೆಯ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.







