ಸಿಎಎ ಪ್ರತಿಭಟನಕಾರರ ವಿರುದ್ಧದ ಪ್ರಕರಣ: ಎನ್ಐಎಯಿಂದ ಆರ್ಟಿಐ ಕಾರ್ಯಕರ್ತನ ವಿಚಾರಣೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮೇ 10: ಕಳೆದ ಡಿಸೆಂಬರ್ನಲ್ಲಿ ರೈತ ನಾಯಕ ಅಖಿಲ ಗೊಗೊಯಿ ಸೇರಿದಂತೆ ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ದಾಖಲಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಯು ಖ್ಯಾತ ಆರ್ಟಿಐ ಕಾರ್ಯಕರ್ತ ಭಬನ್ ಹಂಡಿಕ್ ಅವರನ್ನು ಶನಿವಾರ ಗುವಾಹಟಿಯಲ್ಲಿರುವ ತನ್ನ ಕಚೇರಿಗೆ ಕರೆಸಿಕೊಂಡು ಸುಮಾರು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿದೆ.
ಇದಕ್ಕೆ ಎರಡು ದಿನಗಳ ಮೊದಲು ಅಸ್ಸಾಂ ಪೊಲೀಸ್ ಕ್ರೈಂ ಬ್ರಾಂಚ್ ಹಂಡಿಕ್ ಮತ್ತು ಕೆಲವು ಸಿಎಎ ವಿರೋಧಿ ಪ್ರತಿಭಟನಕಾರರ ವಿಚಾರಣೆ ನಡೆಸಿತ್ತು.
“ಪೊಲೀಸರು ಕೇಳಿದಂತಹ ಪ್ರಶ್ನೆಗಳನ್ನೇ ಎನ್ಐಎ ಅಧಿಕಾರಿಗಳೂ ಕೇಳಿದ್ದರು. ನನ್ನ ಕಾಲೇಜು ದಿನಗಳಿಂದ ಗೊಗೊಯಿ ಮತ್ತು ಕೃಷಕ್ ಮುಕ್ತಿ ಸಂಗ್ರಾಮ ಸಮಿತಿ(ಕೆಎಂಎಸ್ಎಸ್) ಜೊತೆಗಿನ ಒಡನಾಟದ ಬಗ್ಗೆ,ಕೆಲವು ವರ್ಷಗಳ ಹಿಂದೆ ಕೆಂಎಸ್ಎಸ್ಎಸ್ನ್ನು ತೊರೆದು 2013ರಲ್ಲಿ ಅಸ್ಸಾಮಿನಲ್ಲಿ ಆಮ್ಆದ್ಮಿ ಪಕ್ಷವನ್ನು ಬೆಂಬಲಿಸಿದ್ದೇಕೆ ಮತ್ತು ಅದನ್ನೂ ತೊರೆದಿದ್ದೇಕೆ ಎಂದು ನನ್ನನ್ನು ಎನ್ಐಎ ಪ್ರಶ್ನಿಸಿತ್ತು. ಗೊಗೊಯಿವರ ‘ಮಾವೋವಾದಿ ಸಂಪರ್ಕಗಳ’ ಬಗ್ಗೆಯೂ ನನ್ನನ್ನು ಪ್ರಶ್ನಿಸಲಾಗಿತ್ತು” ಎಂದು ಹಂಡಿಕ್ ತಿಳಿಸಿದರು.
ತನ್ನ ಸಿಎಎ ವಿರೋಧಿ ನಿಲುವು ಮತ್ತು ತಾನು ಆಗಾಗ್ಗೆ ಸರಕಾರದ ನೀತಿಗಳನ್ನು ಹಾಗೂ ಅದರ ಹಿರಿಯ ಸಚಿವರನ್ನು ಪ್ರಶ್ನಿಸುತ್ತಿರುವುದು ಎನ್ಐಎ ಮತ್ತು ರಾಜ್ಯ ಪೊಲೀಸರಿಂದ ತನ್ನ ವಿಚಾರಣೆಗೆ ಕಾರಣವಾಗಿದೆ ಎಂದು ಹಂಡಿಕ್ ಹೇಳಿದರು.