ಎಟಿಎಮ್ ಪಿನ್ ಪಡೆದು ಸಾವಿರಾರು ರೂ. ವಂಚನೆ: ಆರೋಪಿ ಬಂಧನ

ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ಎಟಿಎಂವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಡೆಬಿಟ್ ಕಾಡ್ ನಂಬರ್ ಹಾಗೂ ಪಾಸ್‌ವರ್ಡ್ ಪಡೆದು 37 ಸಾವಿರ ರೂ. ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಮ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಭದ್ರಾವತಿಯ ಹುಡ್ಕೋ ಕಾಲನಿಯ ಎನ್.ಸಾಗರ್ ಅಲಿಯಾಸ್ ದಡಿಯಾ ದಿಲೀಪ್ (27) ಬಂಧಿತ. ಮೇ 5ರಂದು ಭದ್ರಾವತಿ ತಾಲೂಕಿನ ಹೊಸೂರು ಸಿದ್ದಾಪುರ ಗ್ರಾಮದ ವ್ಯಕ್ತಿಯೊಬ್ಬರ ಖಾತೆಯಿಂದ ಹಣ ಡ್ರಾ ಮಾಡಿದ್ದ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಕೆನರಾ ಬ್ಯಾಂಕ್‌ನ ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ತಾಂತ್ರಿಕ ತೊಂದರೆ ಉಂಟಾಗಿತ್ತು. ಈ ವೇಳೆ ಹೊರಗಡೆ ಇದ್ದ ವ್ಯಕ್ತಿಯಿಂದ ಸಹಾಯ ಪಡೆದಿದ್ದರು. ಈ ವೇಳೆ ಕಾರ್ಡ್ ನಂಬರ್ ಮತ್ತು ಪಾಸ್‌ವರ್ಡ್ ಪಡೆದಿದ್ದ ಆರೋಪಿ ಅವರ ಖಾತೆಯಿಂದ 37,887 ರೂ. ಡ್ರಾ ಮಾಡಿದ್ದ. ಈ ಬಗ್ಗೆ ಶಿವಮೊಗ್ಗ ಸಿಇಎನ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಶನಿವಾರ ಆರೋಪಿ ಬಂಧಿಸಿದ್ದಾರೆ. ಆತನಿಂದ 45 ಸಾವಿರ ರೂ. ವಶಕ್ಕೆ ಪಡೆಯಲಾಗಿದೆ.





