ಒಂದೇ ತಿಂಗಳಲ್ಲಿ ಮೂರನೇ ಬಾರಿ ಕಂಪಿಸಿದ ದಿಲ್ಲಿ ಮಹಾನಗರ

ಹೊಸದಿಲ್ಲಿ, ಮೇ 10: ದಿಲ್ಲಿ ಮತ್ತು ಸುತ್ತುಮುತ್ತಲಿನ ಪ್ರದೇಶಗಳಲ್ಲಿ ರವಿವಾರ ಮಧ್ಯಾಹ್ನ 1:45ರ ಸುಮಾರಿಗೆ ಲಘು ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.4ರಷ್ಟಿದ್ದು, ಯಾವುದೇ ಆಸ್ತಿಹಾನಿ ತಕ್ಷಣಕ್ಕೆ ವರದಿಯಾಗಿಲ್ಲ. ಇದರೊಂದಿಗೆ ದಿಲ್ಲಿ ಒಂದು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ಭೂಕಂಪಕ್ಕೆ ಸಾಕ್ಷಿಯಾಗಿದೆ.
ಭೂಕಂಪದ ಕೇಂದ್ರ ಬಿಂದು ದಿಲ್ಲಿ-ಉತ್ತರ ಪ್ರದೇಶ ಗಡಿಗೆ ಸಮೀಪ ಐದು ಕಿ.ಮೀ.ಆಳದಲ್ಲಿತ್ತು ಎಂದು ಹವಾವಾನ ಇಲಾಖೆಯ ಭೂಕಂಪಶಾಸ್ತ್ರ ವಿಭಾಗದ ನಿರ್ದೇಶಕ ಜೆ.ಎಲ್.ಗೌತಮ ತಿಳಿಸಿದರು. ಕಳೆದ ಕೆಲವು ವಾರಗಳಲ್ಲಿ ಸಂಭವಿಸಿದ್ದ ಎರಡು ಭೂಕಂಪಗಳ ಕೆಂದ್ರಬಿಂದುಗಳೂ ಇದೇ ಪ್ರದೇಶದಲ್ಲಿ ಸ್ಥಿತಗೊಂಡಿದ್ದವು.
ಐದು ಭೂಕಂಪ ವಲಯಗಳ ಪೈಕಿ ದಿಲ್ಲಿ ನಾಲ್ಕನೆಯದಕ್ಕೆ ಸೇರಿದೆ. ದಿಲ್ಲಿಯಲ್ಲಿ ಭೂಕಂಪದ ಕೇಂದ್ರಬಿಂದುವಿರುವುದು ಅಪರೂಪವಾಗಿದ್ದರೂ ದೂರದ ಮಧ್ಯ ಏಷ್ಯಾ ಅಥವಾ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ ಭೂಕಂಪ ಸಂಭವಿಸಿದರೂ ದಿಲ್ಲಿ ಕಂಪಿಸುತ್ತದೆ.
Next Story





