ಬ್ರಿಟನ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದ 329 ಭಾರತೀಯರು ಸ್ವದೇಶಕ್ಕೆ ವಾಪಸ್
ಮುಂಬೈ, ಮೇ 10: ಕೊರೋನ ವೈರಸ್ ಹಿನ್ನೆಲೆಯಲ್ಲಿ ಪ್ರಯಾಣ ನಿರ್ಬಂಧಗಳಿಂದಾಗಿ ಬ್ರಿಟನ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ 329 ಭಾರತೀಯರು ರವಿವಾರ ಬೆಳಿಗ್ಗೆ ಮುಂಬೈ ತಲುಪಿದ್ದಾರೆ.
ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ತೆರವುಗೊಳಿಸಲು ಸರಕಾರವು ಹಮ್ಮಿಕೊಂಡಿರುವ ವಿಶೇಷ ತೆರವು ಕಾರ್ಯಾಚರಣೆ ‘ವಂದೇಭಾರತ ಮಿಷನ್’ನಡಿ ಶನಿವಾರ 329 ಪ್ರಯಾಣಿಕರನ್ನು ಹೊತ್ತುಕೊಂಡು ಲಂಡನ್‌ನಿಂದ ನಿರ್ಗಮಿಸಿದ್ದ ಏರ್ ಇಂಡಿಯಾದ ಬೋಯಿಂಗ್ 777 ವಿಮಾನವು ರವಿವಾರ ನಸುಕಿನ 1:30ಕ್ಕೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ ಎಂದು ನಾಗರಿಕ ವಾಯುಯಾನ ಸಚಿವಾಲಯದ ವಕ್ತಾರರು ತಿಳಿಸಿದರು.
ಕೋವಿಡ್-19 ಲಕ್ಷಣಗಳಿರುವ ಪ್ರಯಾಣಿಕರನ್ನು ಐಸೊಲೇಷನ್ ಕೇಂದ್ರಗಳಿಗೆ ಸಾಗಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಶನಿವಾರ ತಿಳಿಸಿದ್ದರು.
ಮುಂಬೈ ನಿವಾಸಿಗಳಾಗಿರುವ ಲಕ್ಷಣರಹಿತ ಪ್ರಯಾಣಿಕರನ್ನು ಹೋಟೆಲ್‌ಗಳಂತಹ ಕ್ವಾರಂಟೈನ್ ಕೇಂದ್ರಗಳಿಗೆ ರವಾನಿಸಲಾಗಿದೆ. ಮುಂಬೈನ ಹೊರಗಿನ ಪ್ರಯಾಣಿಕರನ್ನು ಸರಕಾರವು ಅವರ ಜಿಲ್ಲಾ ಕೇಂದ್ರಗಳಿಗೆ ಕಳುಹಿಸಿದೆ.





