ಕೊರೋನ ವೈರಸ್ ಜೊತೆ ಬದುಕುವುದನ್ನು ಕಲಿಯಬೇಕಿದೆ: ದಿಲ್ಲಿ ಸಿಎಂ ಕೇಜ್ರಿವಾಲ್

ಹೊಸದಿಲ್ಲಿ, ಮೇ 10: ಕೊರೋನ ವೈರಸ್ ಜೊತೆ ಬದುಕುವುದನ್ನು ಕಲಿಯಬೇಕಿದೆ ಎಂದು ದಿಲ್ಲಿಗರಿಗೆ ರವಿವಾರ ನೆನಪಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು,ನಗರದಲ್ಲಿಯ ಸುಮಾರು ಶೇ.75ರಷ್ಟ್ಟು ಕೋವಿಡ್-19 ರೋಗಿಗಳು ಲಕ್ಷಣರಹಿತರಾಗಿದ್ದಾರೆ ಅಥವಾ ಸೌಮ್ಯ ಲಕ್ಷಣಗಳನ್ನು ಹೊಂದಿದ್ದ್ದಾರೆ. ರೋಗಿಗಳ ಬಿಡುಗಡೆ ಕುರಿತಂತೆ ಕೇಂದ್ರ ಸರಕಾರವು ಶನಿವಾರ ಹೊರಡಿಸಿರುವ ಪರಿಷ್ಕೃತ ಮಾರ್ಗಸೂಚಿಯಂತೆ ಈ ರೋಗಿಗಳಿಗೆ ತಮ್ಮ ಮನೆಗಳಲ್ಲಿಯೇ ಚೇತರಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
‘ದಿಲ್ಲಿಯಲ್ಲಿ ಈವರೆಗೆ ವರದಿಯಾದ ಒಟ್ಟು 6,923 ಕೊರೋನ ವೈರಸ್ ಪ್ರಕರಣಗಳಲ್ಲಿ 2,069 ರೋಗಿಗಳು ಚೇತರಿಸಿಕೊಂಡಿದ್ದಾರೆ. 73 ಜನರು ಮೃತಪಟ್ಟಿದ್ದಾರೆ. ಮೃತರ ಪೈಕಿ ಶೇ.82ರಷ್ಟು ಜನರು 50 ವರ್ಷಕ್ಕೂ ಹೆಚ್ಚಿನ ವಯೋಮಾನದವರಾಗಿದ್ದರು. ಹಿರಿಯ ಪ್ರಜೆಗಳು ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ. ನಾವು ಹಿರಿಯರ ಬಗ್ಗೆ ಕಾಳಜಿ ವಹಿಸಬೇಕಿದೆ. ಅವರು ಮನೆಯಿಂದ ಹೊರಗೆ ಹೋಗುವುದನ್ನು ನಿವಾರಿಸಬೇಕು ’ಎಂದು ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಕೇಜ್ರಿವಾಲ್ ಹೇಳಿದರು.
‘ಸದ್ಯ ಕೇವಲ 1,463 ರೋಗಿಗಳು ಮಾತ್ರ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಲಕ್ಷಣರಹಿತರು ಮತ್ತು ಸೌಮ್ಯ ಲಕ್ಷಣಗಳನ್ನು ಹೊಂದಿರುವರನ್ನು ಆಸ್ಪತ್ರೆಗಳಿಂದ ಬಿಡುಗಡೆಗೊಳಿಸಲಾಗಿದ್ದು,ಅವರು ಚೇತರಿಕೆಯ ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ತಂಡಗಳು ಅವರ ಮನೆಗಳಿಗೆ ಭೇಟಿ ನೀಡುತ್ತಿವೆ. ಇಂತಹ ರೋಗಿಗಳು ತಮ್ಮ ಮನೆಗಳಲ್ಲಿ ಪ್ರತ್ಯೇಕ ಕೋಣೆ ಹೊಂದಿಲ್ಲದಿದ್ದರೆ ಅವರನ್ನು ಕೋವಿಡ್-19 ಕೇರ್ ಸೆಂಟರ್‌ಗಳಲ್ಲಿ ದಾಖಲಿಸಲಾಗುವುದು. ಕೋವಿಡ್-19ರ ವಿರುದ್ಧದ ಹೋರಾಟದಲ್ಲಿ ಸಂಪನ್ಮೂಲಗಳ ಕೊರತೆಯಾಗದಂತೆ ಖಾಸಗಿ ಆ್ಯಂಬುಲನ್ಸ್‌ಗಳ ಸೇವೆಯನ್ನು ಪಡೆದಿದ್ದೇವೆ ’ಎಂದರು. ದಿಲ್ಲಿ ಭಾರತದಲ್ಲಿ ಅತ್ಯಂತ ಹೆಚ್ಚಿನ ಕೊರೋನ ವೈರಸ್ ಪ್ರಕರಣಗಳು ದಾಖಲಾಗಿರುವ ಮೂರನೇ ನಗರವಾಗಿದೆ.
‘ದಿಲ್ಲಿಯಲ್ಲಿ ಒಟ್ಟಾರೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದರೂ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ನಾವೀಗ ಕೊರೋನ ವೈರಸ್ ಜೊತೆ ಬದುಕುವುದನ್ನು ಕಲಿಯಬೇಕಿದೆ ’ಎಂದು ಕೇಜ್ರಿವಾಲ್ ಹೇಳಿದರು. ಕಳೆದ ವಾರ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ್ದ ಸಂದರ್ಭದಲ್ಲಿಯೂ ಕೇಜ್ರಿವಾಲ್ ಈ ಮಾತನ್ನು ಹೇಳಿದ್ದರು.
ಕೊರೋನ ವಾರಿಯರ್ಸ್‌ಗಳ ಹಿತರಕ್ಷಣೆಗಾಗಿ ತನ್ನ ಸರಕಾರವು ತೆಗೆದುಕೊಂಡಿರುವ ಕ್ರಮಗಳನ್ನು ಟೀಕಿಸಿರುವ ಪ್ರತಿಪಕ್ಷಗಳ ವಿರುದ್ಧ ದಾಳಿನಡೆಸಿದ ಕೇಜ್ರಿವಾಲ್,‘ಕೊರೋನ ವಾರಿಯರ್‌ಗಳು ಅನಾರೋಗ್ಯಕ್ಕೆ ಗುರಿಯಾದರೆ ಅವರನ್ನು ನೋಡಿಕೊಳ್ಳಲು ಪಂಚತಾರಾ ಹೋಟೆಲ್‌ಗಳನ್ನು ಸರಕಾರವು ಕಾಯ್ದಿರಿಸಿದೆ. ಅವರ ಕಾಳಜಿ ವಹಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ಇದಕ್ಕಾಗಿ ಪ್ರತಿಪಕ್ಷಗಳು ನಮ್ಮನ್ನು ಟೀಕಿಸುತ್ತಿರುವುದು ವಿಚಿತ್ರವಾಗಿದೆ ’ಎಂದು ಯಾವುದೇ ಪಕ್ಷವನ್ನು ಹೆಸರಿಸದೆ ಹೇಳಿದರು.







