ಪರಿಹಾರ ಕೋರಿ ಅರ್ಚಕರಿಂದ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆ

ಬೆಳಗಾವಿ, ಮೇ 10: ಲಾಕ್‍ಡೌನ್ ಜಾರಿ ಹಿನ್ನೆಲೆಯಲ್ಲಿ ದೇಗುಲಗಳ ಅರ್ಚಕರು ರಾಜ್ಯ ಸರಕಾರಕ್ಕೆ ಪರಿಹಾರ ನೀಡುವಂತೆ ನಿರ್ದೇಶಿಸಲು ಕೋರಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ರಾಜ್ಯದಲ್ಲಿ ಸುಮಾರು 35,500 ದೇಗುಲಗಳಿದ್ದು, ಆದಾಯಕ್ಕೆ ಅನುಗುಣವಾಗಿ ಎ, ಬಿ ಹಾಗೂ ಸಿ ಶ್ರೇಣಿಗಳೆಂದು ವಿಂಗಡಿಸಲಾಗಿದೆ. ಇಲ್ಲಿ ರಾಜ್ಯಕ್ಕೆ ವರಮಾನ ತಂದುಕೊಡುವ ಎ ಮತ್ತು ಬಿ ಶ್ರೇಣಿಗಳ ದೇವಾಲಯಗಳ ಅರ್ಚಕರಿಗೆ ಹಾಗೂ ಅಲ್ಲಿನ ಕೆಲಸಗಾರರಿಗೆ ರಾಜ್ಯ ಸರಕಾರ ಸಂಬಳ ನೀಡುತ್ತಿದೆ.
ಆದರೆ, ಹಳ್ಳಿಗಳಲ್ಲಿ ಕೇಂದ್ರೀಕೃತವಾಗಿರುವ ಶೇ.99ರಷ್ಟು ದೇವಸ್ಥಾನಗಳು ವರಮಾನ ತಂದುಕೊಡುತ್ತಿಲ್ಲ. ಹೀಗಾಗಿ, ಅಲ್ಲಿನ ಅರ್ಚಕರಿಗೆ ಹಾಗೂ ಸೇವಾನಿರತರಿಗೆ ದಿನಕ್ಕೆ ಕೇವಲ 131 ರೂ.ಗಳನ್ನು ದೇವರ ಪೂಜೆ, ದೇಗುಲ ನಿರ್ವಹಣೆ ಹಾಗೂ ಅರ್ಚಕರ ಕುಟುಂಬ ನಿರ್ವಹಣೆಗಾಗಿ ನೀಡಲಾಗುತ್ತಿದೆ. ಹೀಗಾಗಿ, ಈ ದೇಗುಲಗಳ ಅರ್ಚಕರು ಬರುವ ದಕ್ಷಿಣೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದರು. ಆದರೆ, ಕೊರೋನ ಲಾಕ್‍ಡೌನ್‍ನಿಂದಾಗಿ ಭಕ್ತರಿಲ್ಲದೇ ಅರ್ಚಕರು ಪರದಾಡುವಂತಾಗಿದೆ. ಅಲ್ಲದೆ, ದೇವರ ಪೂಜೆಗೆ ಭಕ್ತರ ಕೊಡುಗೆಗಳು ಸಿಗದೇ ಅದರ ಖರ್ಚನ್ನು ಕೂಡ ನಿರ್ವಹಿಸಲಾಗದೆ ಕಷ್ಟಪಡುತ್ತಿದ್ದಾರೆ.
ಇಲ್ಲಿ ಅರ್ಚಕರಿಗೆ ಹಾಗೂ ದೇವರ ಪೂಜೆಗೆ ಹಣ ನೀಡದೇ ಇರುವುದು ದೇವಾಲಯಗಳ ವ್ಯವಸ್ಥೆಗೆ ದೊಡ್ಡ ಪೆಟ್ಟುಕೊಟ್ಟಂತಾಗಿದೆ. ಎ ಮತ್ತು ಬಿ ಶ್ರೇಣಿಯ ಹೊರತಾಗಿ ಸಿ ಶ್ರೇಣಿಯ ಅರ್ಚಕರನ್ನು ಬೇರೆಯಾಗಿ ವರ್ಗೀಕರಿಸಿರುವುದು ಅನುಚ್ಛೇದ 14ರ ಸ್ಪಷ್ಟ ಉಲ್ಲಂಘನೆಯಾಗಿದೆ. ದೇವರ ಪೂಜೆಗೆ ಅಗತ್ಯವಿರುವ ಕನಿಷ್ಠ ಸಾಮಗ್ರಿಗಳನ್ನು ಒದಗಿಸುವಲ್ಲಿ ವಿಫಲರಾಗಿ, ದೈವತ್ವವನ್ನು ದುರ್ಬಲಗೊಳಿಸುವುದು, ಅನುಚ್ಛೇದ 21(ವ್ಯಕ್ತಿಯ ಜೀವನ ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯ ಹಕ್ಕು) ಮತ್ತು ಅನುಚ್ಛೇದ 25(ಧರ್ಮಕ್ಕೆ ಸಂಬಂಧಿಸಿದ ವೃತ್ತಿ, ಪಾಲನೆ ಮತ್ತು ಪ್ರಚಾರದ ರಕ್ಷಣೆಯ ಹಕ್ಕು)ರ ಉಲ್ಲಂಘನೆಯಾಗಿದೆ. ದೇವಾಲಯಗಳನ್ನು ಸರಕಾರವೇ ಸ್ವಾಧೀನ ಪಡಿಸಿಕೊಂಡಿರುವುದರಿಂದ, ಅದರ ಅರ್ಚಕರು ಹಾಗೂ ದೇವರ ನಿರ್ವಹಣೆಯ ಜವಾಬ್ದಾರಿಯು ಸರಕಾರಕ್ಕೆ ಸೇರಿದ್ದಾಗಿದೆ. ಪದೇ ಪದೇ ಈ ವಿಚಾರದಲ್ಲಿ ರಾಜ್ಯ ಸರಕಾರಕ್ಕೆ ಅರ್ಚಕರು ಮನವಿ ಮಾಡಿದ್ದರೂ ಯಾವೊಂದು ಕ್ರಮಗಳನ್ನು ಕೈಗೊಂಡಿಲ್ಲ. ಈ ಎಲ್ಲ ಕಾರಣಗಳನ್ನು ಅರ್ಜಿಯಲ್ಲಿ ತಿಳಿಸಿರುವ ಇಂಡಿಕ್ ಕಲೆಕ್ಟೀವ್ ಟ್ರಸ್ಟ್ ತನ್ನ ಟ್ರಸ್ಟಿ ಶ್ರೀಹರಿ ಕುತ್ಸಾರ ಮೂಲಕ ರಾಜ್ಯ ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಸಿ, ಸೂಕ್ತ ಪರಿಹಾರ ಒದಗಿಸಿ ಎಂದು ಮನವಿ ಮಾಡಿದೆ.







