ಶೇಕಡ 75 ವಲಸೆ ಕಾರ್ಮಿಕರು ಮರಳಿದ್ದು ಈ ಎರಡು ರಾಜ್ಯಗಳಿಗೆ...

ಹೊಸದಿಲ್ಲಿ : ಲಾಕ್‌ಡೌನ್‌ನಿಂದಾಗಿ ವಿವಿಧೆಡೆ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರನ್ನು ವಾಪಾಸು ಹುಟ್ಟೂರಿಗೆ ಕಳುಹಿಸುವ ಸಲುವಾಗಿ ವ್ಯವಸ್ಥೆ ಮಾಡಲಾದ ಪ್ರತಿ ನಾಲ್ಕು ಶ್ರಮಿಕ್ ವಿಶೇಷ ರೈಲುಗಳ ಪೈಕಿ ಮೂರು ರೈಲುಗಳು ಮುಖ ಮಾಡಿದ್ದು ಪೂರ್ವ ಉತ್ತರ ಪ್ರದೇಶ ಮತ್ತು ಬಿಹಾರಕ್ಕೆ. ಈ ಎರಡು ರಾಜ್ಯಗಳಿಂದ ಕಾರ್ಮಿಕರ ವಲಸೆ ಎಷ್ಟು ಪ್ರಮಾಣದಲ್ಲಿದೆ ಎನ್ನುವುದು ಇದರಿಂದ ವ್ಯಕ್ತವಾಗಿದೆ.
ಶೇಕಡ 44ರಷ್ಟು ರೈಲುಗಳು ಉತ್ತರ ಪ್ರದೇಶಕ್ಕೆ ಆಗಮಿಸಿದ್ದು, ಶೇಕಡ 30ರಷ್ಟು ರೈಲುಗಳು ಬಿಹಾರ ತಲುಪಿವೆ. ಭಾರತೀಯ ರೈಲ್ವೆ ಒಟ್ಟು 366 ವಿಶೇಷ ರೈಲುಗಳನ್ನು ಹೊರಡಿಸಿತ್ತು. ಈ ಪೈಕಿ 287 ರೈಲುಗಳು ಗಮ್ಯತಾಣಗಳನ್ನು ತಲುಪಿವೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಮಧ್ಯಪ್ರದೇಶ, ಒಡಿಶಾ ಹಾಗೂ ಜಾರ್ಖಂಡ್ ರಾಜ್ಯಗಳಿಗೂ ರೈಲುಗಳು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿವೆ.
ಈ ಮಧ್ಯೆ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಹೇಳಿಕೆ ನೀಡಿ, 300 ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಸಿದ್ಧವಿದೆ. ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗಳನ್ನು ಮೂರರಿಂದ ನಾಲ್ಕು ದಿನಗಳ ಒಳಗಾಗಿ ಹುಟ್ಟೂರಿಗೆ ತಲುಪಿಸಲು ರಾಜ್ಯ ಸರ್ಕಾರಗಳು ಅನುಮತಿ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಪತ್ರ ಬರೆದು, ವಲಸೆ ಕಾರ್ಮಿಕರನ್ನು ಹೊತ್ತ ರೈಲುಗಳು ಪಶ್ಚಿಮ ಬಂಗಾಳಕ್ಕೆ ಪ್ರವೇಶಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದ ಬೆನ್ನಲ್ಲೇ ಗೋಯಲ್ ಈ ಮನವಿ ಮಾಡಿಕೊಂಡಿದ್ದಾರೆ.
ಈಗ ತಲುಪಿರುವ 287 ರೈಲುಗಳ ಪೈಕಿ 127 ರೈಲುಗಳು ಉತ್ತರಪ್ರದೇಶಕ್ಕೆ ಆಗಮಿಸಿವೆ. 87 ರೈಲುಗಳು ಬಿಹಾರ ತಲುಪಿವೆ. ಮಧ್ಯಪ್ರದೇಶಕ್ಕೆ 24, ಒಡಿಶಾಗೆ 20, ಜಾರ್ಖಂಡ್‌ಗೆ 16 ರೈಲುಗಳು ಆಗಮಿಸಿವೆ. ಆಂಧ್ರಪ್ರದೇಶ ಹಾಗೂ ಹಿಮಾಚಲ ಪ್ರದೇಶಕ್ಕೆ ತಲಾ ಒಂದು ರೈಲು ಆಗಮಿಸಿದ್ದರೆ, ಮಹಾರಾಷ್ಟ್ರ ತಲುಪಿರುವ ರೈಲುಗಳ ಸಂಖ್ಯೆ 3. ರಾಜಸ್ಥಾನಕ್ಕೆ 4 ಹಾಗೂ ತೆಲಂಗಾಣ ಮತ್ತು ಪಶ್ಚಿಮ ಬಂಗಾಳಕ್ಕೆ ತಲಾ ಎರಡು ರೈಲುಗಳು ಆಗಮಿಸಿವೆ. ಸುರಕ್ಷಿತ ಅಂತರ ಕಾಪಾಡುವ ಸಲುವಾಗಿ ಒಂದು ರೈಲಿನಲ್ಲಿ ಗರಿಷ್ಠ 1200 ಪ್ರಯಾಣಿಕರಿಗೆ ವ್ಯವಸ್ಥೆ ಮಾಡಲಾಗಿದೆ.







