ಮಾರ್ಚ್ 18ರಿಂದ ಜರ್ಮನ್ ಪ್ರಜೆಗೆ ವಿಮಾನ ನಿಲ್ದಾಣದಲ್ಲೇ ವಾಸ
ಹೊಸದಿಲ್ಲಿ : ಸ್ಟೀವನ್ ಸ್ಪಿಲ್‌ಬರ್ಗ್ ಅವರ ದ ಟರ್ಮಿನಲ್ ಚಿತ್ರದಲ್ಲಿ ಟಾಮ್ ಹಾಕಿನ್ಸ್ ನಿರ್ವಹಿಸಿದ್ದ ವಿಕ್ಟರ್ ನವೋಸ್ಕಿಯ ಎಂಬ ಪಾತ್ರದ ಪಾಡು ಈ ಜರ್ಮನ್ ಪ್ರಜೆಗೆ ಅಕ್ಷರಶಃ ಬಂದಿದೆ. 40 ವರ್ಷ ವಯಸ್ಸಿನ ಎಡ್ಗರ್ಡ್ ಝೀಬತ್‌ಗೆ ಕಳೆದ 54 ದಿನಗಳಿಂದ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ವಾಸ!
ಮಾರ್ಚ್ 18ರಂದು ಹನೋಯಿಯಿಂದ ಇಸ್ತಾಂಬುಲ್‌ಗೆ ತೆರಳುವ ಮಾರ್ಗಮಧ್ಯದಲ್ಲಿ ದೆಹಲಿಯಲ್ಲಿ ಸಿಕ್ಕಿಹಾಕಿಕೊಂಡರು. ಕೋವಿಡ್-19 ಹಿನ್ನೆಲೆಯಲ್ಲಿ ಅಂದು ಭಾರತ ಟರ್ಕಿಗೆ ಹೋಗುವ ಹಾಗೂ ಟರ್ಕಿಯಿಂದ ಆಗಮಿಸುವ ಎಲ್ಲ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಿತು. ನಾಲ್ಕು ದಿನಗಳ ಬಳಿಕ ಭಾರತ ಎಲ್ಲ ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದು ಮಾಡಿದೆ. ಮಾರ್ಚ್ 25ರಂದು ದೇಶವ್ಯಾಪಿ ಲಾಕ್‌ಡೌನ್ ಘೋಷಿಸಿದ್ದು, ಇದು ಮೇ 17ರವರೆಗೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಝೀಬತ್ ವಿಮಾನ ನಿಲ್ದಾಣದಲ್ಲೇ ಕಾಲ ಕಳೆಯುವಂತಾಗಿದೆ.
ವಿಮಾನ ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡ ಇತರ ಪ್ರಯಾಣಿಕರಿಗೆ ಹೋಲಿಸಿದರೆ ಝೀಬತ್ ಪ್ರಕರಣ ಸಂಕೀರ್ಣ. ಈತ ತನ್ನ ದೇಶದಲ್ಲಿ ಅಪರಾಧ ದಾಖಲೆ ಹೊಂದಿದ್ದಾನೆ. ಈತ ಬೇರೆ ದೇಶದಲ್ಲಿ ಇರುವ ಕಾರಣದಿಂದ ಜರ್ಮನಿ ಇವರನ್ನು ಕಸ್ಟಡಿಗೆ ಪಡೆಯಲು ನಿರಾಕರಿಸಿದೆ ಎಂದು ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈತನ ಅಪರಾಧ ದಾಖಲೆ ಹಿನ್ನೆಲೆಯಲ್ಲಿ ವೀಸಾ ನೀಡಲು ಭಾರತ ಕೂಡಾ ನಿರಾಕರಿಸಿದ್ದು, ಝೀಬತ್ ಅವರ ತ್ರಿಶಂಕು ಸ್ಥಿತಿಗೆ ಕಾರಣ. ಈ ಬಗ್ಗೆ ಜರ್ಮನ್ ರಾಜಭಾರ ಕಚೇರಿಗೆ ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ವಿಯೇಟ್ನಾಂನಿಂದ ವೀಟ್‌ಜೆಟ್ ಏರ್ ವಿಮಾನದಲ್ಲಿ ಮಾರ್ಚ್ 18ರಂದು ಆಗಮಿಸಿದ ಝೀಬತ್ ಇಸ್ತಾಂಬುಲ್‌ಗೆ ಹೋಗುವ ಸಲುವಾಗಿ ದೆಹಲಿಯಲ್ಲಿ ಬೇರೆ ವಿಮಾನ ಏರಬೇಕಿತ್ತು. ತಾನು ಹೋಗಬೇಕಾದ ಸ್ಥಳಕ್ಕೆ ತೆರಳುವ ಎಲ್ಲ ವಿಮಾನಗಳು ರದ್ದಾಗಿರುವುದು ಆಗಷ್ಟೇ ಅವರ ಗಮನಕ್ಕೆ ಬಂತು ಎಂದು ಹೇಳಲಾಗಿದೆ.
ವರ್ಗಾಂತರ ಪ್ರಯಾಣಿಕರಿಗೆ ಮೀಸಲಿದ್ದ ಜಾಗದಲ್ಲಿ ಬೇರೆ ಬೇರೆ ದಿನ ಆಗಮಿಸಿದ ಇಂಥ ನಾಲ್ಕು ಮಂದಿ ಪ್ರಯಾಣಿಕರ ಜತೆ ಒಂದು ವಾರವನ್ನು ಝೀಬತ್ ಕಳೆದರು. ಈ ಹಿನ್ನೆಲೆಯಲ್ಲಿ ಇಬ್ಬರು ಶ್ರೀಲಂಕಾ ನಾಗರಿಕರು, ಮಾಲ್ಡೀವ್ಸ್ ಹಾಗೂ ಫಿಲಿಫೀನ್ಸ್‌ನ ತಲಾ ಒಬ್ಬರು ನಾಗರಿಕರು ಮತ್ತು ಝೀಬತ್ ಬಗ್ಗೆ ವಿಮಾನ ನಿಲ್ದಾಣ ಅಧಿಕಾರಿಗಳು ಆಯಾ ದೇಶದ ರಾಜಭಾರ ಕಚೇರಿಗಳಿಗೆ ಮಾಹಿತಿ ನೀಡಿದ್ದರು ಎಂದು ಮೂಲಗಳು ವಿವರಿಸಿವೆ.
ಇತರ ನಾಲ್ಕು ಮಂದಿ ಪ್ರಯಾಣಿಕರಿಗೆ ಆಯಾ ರಾಯಭಾರ ಕಚೇರಿಗಳು ಕ್ವಾರಂಟೈನ್ ವ್ಯವ್ಥೆ ಮಾಡಿವೆ. ಆದರೆ ಜರ್ಮನಿ ರಾಯಭಾರ ಕಚೇರಿ ಭಾರತೀಯ ಇಮಿಗ್ರೇಶನ್ ಬ್ಯೂರೊಗೆ ಮಾಹಿತಿ ನೀಡಿ, ಝೀಬತ್ ಕುಖ್ಯಾತ ಅಪರಾಧಿಯಾಗಿದ್ದು, ಹಲವು ಪ್ರಕರಣಗಳು ಆತನ ವಿರುದ್ಧ ಇವೆ. ಈತ ವಿದೇಶಿ ನೆಲದಲ್ಲಿ ಇರುವ ಕಾರಣ ಕಸ್ಟಡಿಗೆ ಪಡೆಯುವಂತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿತ್ತು. ದೆಹಲಿ ಪೊಲೀಸರಿಗೆ ಕೂಡಾ ಈ ಬಗ್ಗೆ ಮಾಹಿತಿ ನೀಡಲಾಗಿದೆ.
ಅಪರಾಧ ಹಿನ್ನೆಲೆ ಕಾರಣದಿಂದ ಭಾರತ ಕೂಡಾ ಇವರಿಗೆ ವೀಸಾ ನೀಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಅತಂತ್ರ ಹಾಗೂ ಅಕ್ರಮವಾಗಿ ವಿಮಾನ ನಿಲ್ದಾಣದಲ್ಲೇ ಕಳೆಯುವಂತಾಗಿದೆ. ವಾಸ್ತವವಾಗಿ ಅಂತರರಾಷ್ಟ್ರೀಯ ಪ್ರಯಾಣಿಕರು ವಿಮಾನ ನಿಲ್ದಾಣದ ಟ್ರಾನ್ಸಿಸ್ಟ್ ಏರಿಯಾದಲ್ಲಿ ಒಂದು ದಿನ ಮಾತ್ರ ಉಳಿದುಕೊಳ್ಳಲು ಅವಕಾಶವಿದೆ. ಝೀಬತ್ ಭಾರತೀಯ ವೀಸಾಗೆ ಅರ್ಜಿ ಸಲ್ಲಿಸಿಲ್ಲ ಎಂದು ಮೂಲಗಳು ಹೇಳಿವೆ.