ಮಹಾರಾಷ್ಟ್ರ ವಿಧಾನಪರಿಷತ್‌ಗೆ ಉದ್ಧವ್ ಠಾಕ್ರೆ ಅವಿರೋಧ ಆಯ್ಕೆಗೆ ವೇದಿಕೆ ಸಜ್ಜು

ಮುಂಬೈ,ಮೇ 11: ಒಂಭತ್ತು ಸ್ಥಾನಗಳಿಗಾಗಿ ಮೇ 21ರಂದು ನಡೆಯಲಿರುವ ಚುನಾವಣೆಯಲ್ಲಿ ತನ್ನ ಇಬ್ಬರು ಅಭ್ಯರ್ಥಿಗಳ ಪೈಕಿ ಒಬ್ಬರನ್ನು ಹಿಂದಕ್ಕೆ ಪಡೆದಿರುವುದಾಗಿ ರವಿವಾರ ಕಾಂಗ್ರೆಸ್ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿಧಾನಪರಿಷತ್‌ಗೆ ಅವಿರೋಧವಾಗಿ ಆಯ್ಕೆಯಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ.
ಎಂಎಲ್‌ಸಿ ಚುನಾವಣೆಗೆ ಎರಡು ನಾಮಪತ್ರಗಳ ಪೈಕಿ ಒಂದನ್ನು ಹಿಂಪಡೆಯಲು ನಾವು ನಿರ್ಧರಿಸಿದ್ದೇವೆ. ಶಿವಸೇನೆ, ಎನ್‌ಸಿಪಿ ಹಾಗೂ ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿ ಐದು ಸ್ಥಾನಗಳಿಗೆ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಬಾಲಾ ಸಾಹೇಬ್ ಥೋರಟ್ ಹೇಳಿದ್ದಾರೆ.
ಬಿಜೆಪಿ ನಾಲ್ವರು ಅಭ್ಯರ್ಥಿಗಳನ್ನು ಎಂಎಲ್‌ಸಿ ಸ್ಥಾನಕ್ಕೆ ಕಣಕ್ಕಿಳಿಸುತ್ತಿದೆ. ವಿಧಾನಪರಿಷತ್‌ನ ಎಲ್ಲ 9 ಸ್ಥಾನಗಳ ಚುನಾವಣೆಯು ಅವಿರೋಧವಾಗಿ ನಡೆಯಬೇಕೆಂದು ಠಾಕ್ರೆ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈಗಿನ ತನ್ನ ಹೆಚ್ಚಿನ ಸಮಯವನ್ನು ಕೊರೋನ ವೈರಸ್ ವಿರುದ್ಧ ಹೋರಾಟಕ್ಕೆ ಸಮರ್ಪಿಸಿಕೊಳ್ಳಲು ಬಯಸಿದ್ದಾರೆ ಎಂದು ಶಿವಸೇನೆಯ ಮುಖಂಡ ಸಂಜಯ್ ರಾವತ್ ರವಿವಾರ ವರದಿಗಾರರಿಗೆ ತಿಳಿಸಿದ್ದರು.
ಉದ್ಧವ್ ಠಾಕ್ರೆ ರಾಜ್ಯದ ಉಭಯ ಸದನಗಳ ಸದಸ್ಯರಲ್ಲ. ಇವರು ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಒಬ್ಬರು. ಎಪ್ರಿಲ್ 24ರಂದು ಎಂಎಲ್‌ಸಿಗಳ ಅವಧಿ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆ ನಡೆಯುವ ಅಗತ್ಯ ಎದುರಾಗಿದೆ.







