ಭಾರತದಲ್ಲಿ ಒಂದೇ ದಿನ ಕೊರೋನ ವೈರಸ್ ಸಂಖ್ಯೆಯಲ್ಲಿ ಭಾರೀ ಏರಿಕೆ
ರೋಗಿಗಳ ಚೇತರಿಕೆಯ ದರದಲ್ಲೂ ಸುಧಾರಣೆ

ಹೊಸದಿಲ್ಲಿ, ಮೇ 11:ಭಾರತದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಒಂದೇ ದಿನ ಭಾರೀ ಏರಿಕೆ ಕಂಡುಬಂದಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸ ರೋಗಿಗಳಲ್ಲಿ 4,213 ಕೊರೋನ ವೈರಸ್ ಸೋಂಕು ಕಂಡುಬಂದಿವೆ. ಈ ಮೂಲಕ ಕೊರೋನ ವೈರಸ್ ಒಟ್ಟು ಪ್ರಕರಣಗಳ ಸಂಖ್ಯೆ 67,152 ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಿಳಿಸಿದೆ.
ವಿಶ್ವದ ಒಂದು ದೊಡ್ಡ ಸಾಂಕ್ರಾಮಿಕ ಕಾಯಿಲೆಯಾಗಿರುವ ಕೊರೋನ ವೈರಸ್‌ಗೆ ಭಾರತದಲ್ಲಿ ಈ ತನಕ 2,206 ಜನರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳ ಅವಧಿಯಲ್ಲಿ 97 ಮಂದಿ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗಿನ ತನಕ ರೋಗಿಗಳ ಚೇತರಿಕೆಯ ದರ ಶೇ.31.14 ರಷ್ಟಿದೆ. ಕಳೆದ ರವಿವಾರ ಚೇತರಿಕೆಯ ದರ ಶೇ.26.29ದಷ್ಟಿತ್ತು. ಹೀಗಾಗಿ ಒಂದು ವಾರದಲ್ಲಿ ಚೇತರಿಕೆಯ ದರದಲ್ಲಿ ಗಮನಾರ್ಹ ಸುಧಾರಣೆಯಾಗಿದೆ.
ಕೊರೋನ ವೈರಸ್ ಲಾಕ್‌ಡೌನ್ ಸಡಿಲಗೊಳಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ ನಾಳೆಯಿಂದ ಸೀಮಿತ ಪ್ರಯಾಣಿಕ ರೈಲು ಸೇವೆ ಪುನರಾರಂಭಿಸಲು ನಿರ್ಧರಿಸಿದೆ. ಇಂದಿನಿಂದ ಆನ್‌ಲೈನ್ ಬುಕ್ಕಿಂಗ್ ಆರಂಭವಾಗಲಿದೆ. ಮೇ 17ರಂದು ಮೂರನೇ ಹಂತದ ಲಾಕ್‌ಡೌನ್ ಅಂತ್ಯವಾಗುವ ಮೊದಲು ಈ ಹೆಜ್ಜೆ ಇಡಲಾಗಿದೆ.





