ಅರ್ನಬ್ ಗೋಸ್ವಾಮಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ಮುಂದುವರಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ ಮೇ11: ರಿಪಬ್ಲಿಕ್ ಟಿವಿ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಗೆ ಬಂಧನದಿಂದ ಮಧ್ಯಂತರ ರಕ್ಷಣೆಯನ್ನು ಮುಂದುವರಿಸಿದ ಸುಪ್ರಿಂಕೋರ್ಟ್ ಎಪ್ರಿಲ್ 14ರಂದು ಬಾಂದ್ರಾದ ರೈಲ್ವೆ ನಿಲ್ದಾಣದ ಹೊರಗೆ ವಲಸೆ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಕುರಿತು ಪ್ರಸಾರ ಮಾಡಿದ್ದ ಟಿವಿ ಕಾರ್ಯಕ್ರಮಕ್ಕೆ ಮುಂಬೈ ಪೊಲೀಸರು ದಾಖಲಿಸಿದ ಎಫ್‌ಐಆರ್‌ನ್ನು ರದ್ದುಪಡಿಸಬೇಕೆಂದು ಕೋರಿ ಪತ್ರಕರ್ತ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದ ತೀರ್ಪನ್ನು ಕಾಯ್ದಿರಿಸಿದೆ.
ಪ್ರಕರಣವನ್ನು ಪೊಲೀಸರಿಂದ ಕೇಂದ್ರಿಯ ತನಿಖಾ ಸಂಸ್ಥೆಗೆ(ಸಿಬಿಐ) ವರ್ಗಾಯಿಸಬೇಕೆಂದು ಕೋರಿದ್ದ ಅರ್ಜಿಯ ಆದೇಶವನ್ನೂ ನ್ಯಾಯಾಲಯ ಕಾಯ್ದಿರಿಸಿದೆ.
ಎಫ್‌ಐಆರ್ ರಾಜಕೀಯ ಪ್ರೇರಿತವಾಗಿದ್ದು ತನ್ನ ಬಗ್ಗೆ ಮುಂಬೈ ಪೊಲೀಸರು ಕೆಟ್ಟ ಇಚ್ಛಾಶಕ್ತಿ ಹಾಗೂ ದುರುದ್ದೇಶವನ್ನು ಹೊಂದಿದ್ದಾರೆ ಎಂದು ಪತ್ರಕರ್ತ ಗೋಸ್ವಾಮಿ ತನ್ನ ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ. ಗೋಸ್ವಾಮಿ ಬಲವಂತದ ಕ್ರಮ ಹಾಗೂ ಎಫ್‌ಐಆರ್‌ನಿಂದ ರಕ್ಷಣೆ ಕೋರಿದ್ದಾರೆ.
ಗೋಸ್ವಾಮಿ ಪರ ವಾದ ಮಂಡಿಸಿದ ಹರೀಶ್ ಸಾಳ್ವೆೆ ತನ್ನ ಕಕ್ಷಿದಾರರನ್ನು ಲಾಕ್‌ಡೌನ್ ನಡುವೆ ಮುಂಬೈ ಪೊಲೀಸರು 12ಗಂಟೆಗೂ ಅಧಿಕ ಸಮಯ ವಿಚಾರಣೆ ನಡೆಸಿದ್ದಾರೆ. ಪೊಲೀಸರ ಕ್ರಮ ಮಾಧ್ಯಮ ಸ್ವಾತಂತ್ರಕ್ಕೆ ಧಕ್ಕೆ ತಂದಿದೆ. ಕಂಪೆನಿಯ ಸಿಇಒನ್ನು 6 ಗಂಟೆಗಳ ಕಾಲ ಪ್ರಶ್ನಿಸಲಾಗಿದೆ. ಸುದ್ದಿ ಪ್ರಸಾರಕ್ಕೆ ಸಂಬಂಧಿಸಿ ಕಂಪೆನಿ ಸಿಇಒ ಏನು ಮಾಡಲು ಸಾಧ್ಯ ಎಂದು ವಾದಿಸಿದರು.
ಮಹಾರಾಷ್ತ್ರ ಸರಕಾರದ ಪರ ವಾದಿಸಿದ ವಕೀಲ ಕಪಿಲ್ ಸಿಬಾಲ್ ನೀವು ಸಮಸ್ಯೆಗಳನ್ನು ಸಂವೇದನಾಶೀಲಗೊಳಿಸುವ ಮೂಲಕ ಜನರಿಗೆ ಕಳಂಕ ತರುತ್ತಿದ್ದೀರಿ. ಈ ಕೋಮುವಾದದ ಅಪಹಾಸ್ಯವನ್ನು ನಿಲ್ಲಿಸಬೇಕಾಗಿದೆ. ಸಭ್ಯತೆ ಹಾಗೂ ನೈತಿಕತೆಯನ್ನು ಅನುಸರಿಸಬೇಕಾಗಿದೆ. ಅವರು ಕಾಂಗ್ರೆಸ್ ವಿರುದ್ದ ಆರೋಪ ಮಾಡುತ್ತಿದ್ದಾರೆ ಎಂದು ವಾದಿಸಿದರು.