ಅನಿವಾಸಿ ಕನ್ನಡಿಗರಿಗೆ ಕೇರಳ ಮಾದರಿಯ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿ : ಇಬ್ರಾಹೀಂ ಕನ್ನಂಗಾರ್
ಮಂಗಳೂರು, ಮೇ 11: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳಲ್ಲಿ ಅತಂತ್ರರಾಗಿರುವ ಅನಿವಾಸಿ ಕನ್ನಡಿಗರಿಗೆ ಮಂಗಳೂರಿನಲ್ಲಿ ಕೇರಳ ಮಾದರಿಯ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಬೇಕು ಎಂದು ಎನ್‌ಆರ್‌ಐ ಕಾಂಗ್ರೆಸ್ ಸೆಲ್ ಸೌದಿ ಅರೇಬಿಯಾ ಪೂರ್ವ ಪ್ರಾಂತದ ಸಂಯೋಜಕ ಇಬ್ರಾಹೀಂ ಕನ್ನಂಗಾರ್ ಆಗ್ರಹಿಸಿದ್ದಾರೆ.
'ವಾರ್ತಾಭಾರತಿ' ಜೊತೆ ಮಾತನಾಡಿದ ಅವರು ಗಲ್ಫ್ ರಾಷ್ಟ್ರಗಳಿಂದ ಸುಮಾರು 1ಲಕ್ಷಕ್ಕೂ ಅಧಿಕ ಕನ್ನಡಿಗರು ತವರಿಗೆ ಮರಳಲು ಆಸಕ್ತರಾಗಿದ್ದಾರೆ. ಕೇಂದ್ರ ಸರಕಾರ ಈ ಬಗ್ಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿದೆ ಎಂದು ಹೇಳಿಕೊಂಡಿವೆ. ಆದರೆ ನಮಗೆ ಇನ್ನೂ ಇಲ್ಲಿನ ರಾಯಭಾರಿ ಕಚೇರಿಯಿಂದ ಅಧಿಕೃತವಾಗಿ ಯಾವುದೇ ಸೂಚನೆ ಬಂದಿಲ್ಲ. ಇದರಿಂದ ತವರಿಗೆ ಮರಳಲು ಅಸಕ್ತರಾಗಿ ರುವ ಅನಿವಾಸಿ ಕನ್ನಡಿಗರು ಹತಾಶರಾಗಿದ್ದಾರೆ ಎಂದು ಹೇಳಿದ್ದಾರೆ.
ಈ ಮಧ್ಯೆ ಮಂಗಳೂರಿನಲ್ಲಿ ಕಲ್ಪಿಸಲಾಗುವ ಕ್ವಾರಂಟೈನ್‌ಗೆ ದಿನವೊಂದಕ್ಕೆ ಕನಿಷ್ಟ 2 ಸಾವಿರ ರೂ. ದರ ನಿಗದಿಪಡಿಸಿರುವ ಬಗ್ಗೆ ಮಾಹಿತಿ ಇದೆ. ಅಂದರೆ ಕನಿಷ್ಟ 2 ವಾರದ ಕ್ವಾರಂಟೈನ್‌ಗೆ 30 ಸಾವಿರ ರೂ. ಪಾವತಿಸಬೇಕಾಗುತ್ತದೆ. ಲಾಕ್‌ಡೌನ್‌ನಿಂದ ಅತಂತ್ರರಾಗಿ ತವರಿಗೆ ಮರಳಲು ಬಯಸಿರುವವರು ದುಡಿಯುವ ವರ್ಗ. ಈಗಾಗಲೆ ದುಡಿಮೆಯಿಲ್ಲದೆ ಕಷ್ಟದ ದಿನಗಳನ್ನು ಕಳೆದಿರುವವರಿಗೆ ಕನಿಷ್ಟ 30 ಸಾವಿರ ಪಾವತಿಸಲು ಸಾಧ್ಯವಾಗದು. ಹಾಗಾಗಿ ಕೇರಳ ಮಾದರಿಯ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಬೇಕು ಎಂದು ಇಬ್ರಾಹೀಂ ಕನ್ನಂಗಾರ್ ಒತ್ತಾಯಿಸಿದ್ದಾರೆ.
ಕೇರಳದಲ್ಲಿ ಎಲ್ಲವೂ ಉಚಿತವಾಗಿದೆ. ಅದನ್ನು ಕರ್ನಾಟಕದಲ್ಲಿ ಪಾಲಿಸದಿದ್ದರೆ ಕಾರ್ಮಿಕ ವರ್ಗದ ಗಾಯದ ಮೇಲೆ ಬರೆ ಎಳೆದಂತಾಗಬಹುದು. ಕೆಲಸವಿಲ್ಲದೆ, ಮನೆಗೂ ಏನನ್ನೂ ಕಳುಹಿಸಿಕೊಡಲಾಗದೆ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರಿಗೆ ನೆರವು ನೀಡಬೇಕು. ಸೌದಿ ಅರೇಬಿಯಾದಲ್ಲೇ ಸುಮಾರು 30 ಸಾವಿರ ಮಂದಿ ಅನಿವಾಸಿ ಕನ್ನಡಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ. ನಾಡಿನ ಆರ್ಥಿಕತೆಗೆ ಸಾಕಷ್ಟು ಕೊಡುಗೆ ನೀಡಿರುವ ಅನಿವಾಸಿ ಕನ್ನಡಿಗರನ್ನು ಕಷ್ಟ ಕಾಲದಲ್ಲಿ ಕೈ ಬಿಡಬಾರದು ಎಂದು ಇಬ್ರಾಹೀಂ ಕನ್ನಂಗಾರ್ ಮನವಿ ಮಾಡಿದ್ದಾರೆ.
ಮೇ 12ರಂದು ಸಂಜೆ ದುಬೈಯಿಂದ ಅತಂತ್ರ ಕನ್ನಡಿಗರನ್ನು ಹೊತ್ತ ವಿಮಾನವು ರಾತ್ರಿ ಮಂಗಳೂರು ವಿಮಾನ ನಿಲ್ದಾಣ ತಲುಪಲಿದೆ. ಅವರ ಕ್ವಾರಂಟೈನ್‌ಗೆ ಮಂಗಳೂರಿನಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ವಾರಂಟೈನ್‌ನಲ್ಲಿರುವ ಯಾರಿಗೂ ಕನಿಷ್ಟ ದರ ನಿಗದಿಪಡಿಸಿಲ್ಲ. ಉಚಿತ ಸೌಲಭ್ಯವೂ ಇದೆ. ಕೆಲವರು ಇಂತಹದೇ ಲಾಡ್ಜ್/ಹೊಟೇಲಲ್ಲಿ ತಂಗಲು ಬಯಸಿದರೆ ಅದನ್ನು ಒದಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕೆ ತಗಲುವ ವೆಚ್ಚವನ್ನು ಅವರೇ ಭರಿಸಬೇಕಾಗುತ್ತದೆ ಎಂದು ಅನಿವಾಸಿ ಕನ್ನಡಿಗರಿಗೆ ಕಲ್ಪಿಸಲಾದ ಕ್ವಾರಂಟೈನ್ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡಿರುವ ಮನಪಾ ಅಧಿಕಾರಿ ಮಧು ಮನೋಹರ್ ತಿಳಿಸಿದ್ದಾರೆ.







